ವಿಚಾರವಾದಿಗಳಿಗೆ ಉಳಿಗಾಲವಿಲ್ಲ

Update: 2018-09-22 13:51 GMT

ಭಾಗ-56

2013ರ ಆಗಸ್ಟ್ 20ರಂದು ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾದಾಗ ದೇಶದೆಲ್ಲೆಡೆ ಒಂದು ರೀತಿಯ ತುಮುಲ ಆರಂಭವಾಯಿತು. ವಿಚಾರವಾದಿಗಳ ಮೇಲೆ ಸಾಕಷ್ಟು ರೀತಿಯ ಹಲ್ಲೆ, ದೌರ್ಜನ್ಯಗಳು ನಡೆದಿತ್ತು. ಆದರೆ ಈ ರೀತಿಯ ವ್ಯವಸ್ಥಿತವಾದ ಹತ್ಯೆ ಪ್ರಕರಣ ದೇಶದಲ್ಲಿ ಪ್ರಥಮ. ಆ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವದ ಬಗ್ಗೆ ವಿಚಾರವಾದಿಗಳ ರಾಷ್ಟ್ರ ಮಟ್ಟದ ಕಾರ್ಯಾಗಾರ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ದಾಭೋಲ್ಕರ್ ಹತ್ಯೆಯ ಮರುದಿನ ಬನಶಂಕರಿ ಶಾಪಿಂಗ್ ಸೆಂಟರ್ ಹೊರಗಡೆ ನಾವೊಂದು ಪ್ರತಿಭಟನೆ ನಡೆಸಿದವು. ಆ ಪ್ರತಿಭಟನಾ ಸಭೆಯಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಗೌರಿ ಲಂಕೇಶ್ ಕೂಡಾ ಭಾಗವಹಿಸಿದ್ದರು.

ಆ ಸಂದರ್ಭ ನಾವು ಅಂಧಶ್ರದ್ಧೆ ನಿರ್ಮೂಲನಾ ಕಾಯ್ದೆ ಆಗಬೇಕೆಂದು ಬೇಡಿಕೆಯನ್ನೂ ಇರಿಸಿದ್ದೆವು. ಆರು ತಿಂಗಳಲ್ಲಿ ಎರಡು ಕರಡುಗಳು ರಚನೆಯಾಗಿ ಸಾಕಷ್ಟು ಚರ್ಚೆಯೂ ನಡೆಯಿತು. ಆ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಈ ಕಾಯ್ದೆಯ ವಿಚಾರ ಹಿಂದೆ ಸರಿಯಲ್ಪಟ್ಟಿತು. ಸ್ವಲ್ಪ ಸಮಯದ ಬಳಿಕ ಕಲಬುರ್ಗಿ ಹತ್ಯೆಯಾಯಿತು. ಅವರ ವೈಚಾರಿಕ ಪ್ರಶ್ನೆಗಳಿಂದಾಗಿಯೇ ಅವರ ಕೊಲೆ ಆಗಿರುವುದು ಸ್ಪಷ್ಟ.

ಈ ಸಂದರ್ಭದಲ್ಲಿ ಟಿವಿ ಚಾನೆಲ್‌ಗಳಲ್ಲಿ ನಡೆಯುತ್ತಿದ್ದ ಪ್ಯಾನೆಲ್ ಚರ್ಚೆಯ ವೇಳೆ ಫೋನ್ ಮೂಲಕ ನನ್ನನ್ನು ಚರ್ಚೆಗೆ ಆಹ್ವಾನಿಸಲಾಗಿತ್ತು. ಆ ಸಂದರ್ಭ ಪ್ರೊ. ಅನಂತಮೂರ್ತಿಯವರ ವಿಚಾರ ಪ್ರಸ್ತಾಪಿಸಿ ನನ್ನ ನಿಲುವನ್ನು ಕೇಳಲಾಯಿತು. ದೇವರ ಮೂರ್ತಿ ಕುರಿತಂತೆ ಅವರು ನೀಡಿದ್ದ ಹೇಳಿಕೆಯ ಕುರಿತಾದ ಪ್ರಶ್ನೆಯದು. ಅದು ಅವರ ಅಭಿಪ್ರಾಯ. ಅವರ ಅಭಿಪ್ರಾಯಕ್ಕೆ ಅವರಿಗೆ ಅವಕಾಶವಿದೆ.

ಆಗ ನನಗೆ ಕೇಳಲಾದ ಪ್ರಶ್ನೆ, ನೀವು ಆ ರೀತಿ ಮಾಡುವಿರಾ? ಎಂಬುದಾಗಿತ್ತು. ನಾನು ಇಲ್ಲ ಎಂದು ಉತ್ತರಿಸಿದ್ದೆ. ಯಾಕೆ ಎಂದು ಪ್ರಶ್ನಿಸಿದಾಗ, ನನಗೆ ಹಾಗೆ ಮಾಡಲು ಸೂಕ್ತವಾದ ಸ್ಥಳವಿದೆ ಎಂದು ಉತ್ತರಿಸಿದ್ದೆ. ಹಾಗಾದರೆ ಅವರು ಹೇಳಿದ್ದು ಸರಿಯೇ ಎಂದು ನನಗೆ ಮತ್ತೆ ಪ್ರಶ್ನೆ. ಅದಕ್ಕೆ ನಾನು ಪ್ರತಿಯಾಗಿ ಸ್ವಾಮಿ ದಯಾನಂದ ಸರಸ್ವತಿಯವರು ಕೂಡಾ ಇಲಿ ಮೊದಲಾದ ಪ್ರಾಣಿಗಳು ದೇವರ ಮೂರ್ತಿ, ಫೋಟೊಗಳಿಗೆ ಈ ರೀತಿಯಲ್ಲಿ ತೊಂದರೆ ಮಾಡುವುದನ್ನು ನೋಡಿದ್ದೇವೆ. ಹಾಗಿರುವಾಗ ತನ್ನನ್ನು ರಕ್ಷಿಸಲಾಗದ ದೇವರು ಮನುಷ್ಯನನ್ನು ಹೇಗೆ ರಕ್ಷಿಸಲು ಸಾಧ್ಯ ಎಂದು ತೀರ್ಮಾನಿಸಿ ಮೂರ್ತಿ ಪೂಜೆ ತ್ಯಜಿಸಿರುವುದಾಗಿ ಹೇಳಿದ್ದಾರೆ. ಅದಕ್ಕೇನು ಉತ್ತರ ನೀಡುವುದು ಎಂದು ನಾನು ಪ್ರಶ್ನಿಸಿದಾಗ ಅದನ್ನು ಬಿಡಿ, ಇದಕ್ಕೆ ಉತ್ತರಿಸಿ ಎಂದು ನನ್ನನ್ನು ಕೇಳಿದಾಗ ಕೆಲ ಹೊತ್ತು ವಾಗ್ವಾದ ನಡೆಯಿತು. ಕೊನೆಗೆ ಕರೆಯನ್ನೇ ಕಡಿತಗೊಳಿಸಲಾಗಿತ್ತು. ಕಲಬುರ್ಗಿ ಕೊಲೆಯಾದ ಸಂದರ್ಭ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡದಾದ ಪ್ರತಿಭಟನೆ ನಡೆದು, ಕಾಯ್ದೆ ಜಾರಿಗೆ ಒತ್ತಾಯಿಸಲಾಗಿತ್ತು. ಆ ಪ್ರತಿಭಟನೆಯಲ್ಲಿ ನನ್ನನ್ನೂ ವೇದಿಕೆಯಲ್ಲಿ ಕುಳ್ಳಿರಿಸಿ ಬಹಳ ಹೊತ್ತಿನ ಬಳಿಕ ಮಾತನಾಡಲು ಕರೆಸಲಾಯಿತು. ದಾಭೋಲ್ಕರ್ ಕೊಲೆ ಆದಾಗ ಇಂತಹ ಕಾನೂನು ಬೇಕು ಎಂಬ ಒತ್ತಾಯದ ಮೇರೆಗೆ ಎರಡು ಕರಡನ್ನೂ ರಚಿಸಲಾಯಿತು, ಚರ್ಚೆ ನಡೆಯಿತು ಏನೂ ಆಗಿಲ್ಲ. ಇದೀಗ ಕಲಬುರ್ಗಿ ಕೊಲೆ ಆಗಿದೆ. ಇದೀಗ ನಾವು ಮತ್ತೆ ಆ ಕಾಯ್ದೆಯನ್ನು ಜಾರಿಗೊಳಿಸುವಂತೆ ಬೇಡಿಕೆ ಮಾಡುತ್ತಿದ್ದೇವೆ. ಈ ಕಾಯ್ದೆ ಆಗಬೇಕಾದರೆ ಇನ್ನೆಷ್ಟು ವಿಚಾರವಾದಿಗಳ ಹತ್ಯೆಯಾಗಬೇಕು ಎಂಬ ಪ್ರಶ್ನೆಯನ್ನೂ ನಾನು ಮಾಡಿದ್ದೆ. ಬೇಸರದ ಸಂಗತಿ ಎಂದರೆ, ಸೆಪ್ಟಂಬರ್ 5ರಂದು ಗೌರಿ ಲಂಕೇಶ್ ಕೊಲೆ ಆಯಿತು. ನವೆಂಬರ್‌ನಲ್ಲಿ ಕಾನೂನಿಗೆ ಅನುಮತಿ ನೀಡಲಾಯಿತು. ಕೆಲವೊಂದು ವಿಚಾರಗಳನ್ನು ವಿಚಾರವಾದಿಗಳು ತರ್ಕಿಸಲು ಮುಂದಾದಾಗ ಅದು ಹಿಂದೂ ಧರ್ಮಕ್ಕೆ ವಿರೋಧಿ ಎಂಬ ನೆಲೆಯಲ್ಲಿ ವಿಚಾರವಾದಿಗಳ ಹತ್ಯೆಯಂತಹ ಕೃತ್ಯಗಳು ನಡೆಯುತ್ತಿವೆ. ಜ್ಯೋತಿಷ್ಯ, ವಾಸ್ತು ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದರೆ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಉದ್ದೇಶದಿಂದ ವಿಚಾರವಾದಿಗಳ ಹಲ್ಲೆ, ಕೊಲೆಗಳು ನಡೆಯುತ್ತಿವೆ. ಈಗಲೂ ಈ ರೀತಿ ವಿರೋಧಿಸಿ ಹತ್ಯೆಗೆ ಸಂಚು ರೂಪಿಸುತ್ತಿರುವವರ ಹಿಟ್ ಲಿಸ್ಟ್ ಉದ್ದವಾಗಿದೆ. ಇದರಿಂದಾಗಿ ಹಲವಾರು ವಿಚಾರವಾದಿಗಳು ತಮ್ಮ ಧ್ವನಿಯನ್ನು ಕ್ಷೀಣಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ದೈಹಿಕವಾಗಿ ಕೊಲ್ಲದೆ, ಮಾನಸಿಕವಾಗಿ ಕೊಲ್ಲುವ ಯತ್ನ ನಡೆಯುತ್ತಿದೆ ಎಂಬ ನೋವು ನನ್ನನ್ನು ಕಾಡುತ್ತಿದೆ. ಆದರೆ ನಾನು ಮಾತ್ರ ಯಾವುದು ಸರಿ ಎಂದು ಕಾಣುತ್ತದೆ ಅದರ ಬಗ್ಗೆ ಮಾತನಾಡುತ್ತೇನೆ ಎಂದು ನಿರ್ಧರಿಸಿದ್ದೇನೆ. ಕೆಲವು ಬಾರಿ ನಾನು ಆಲೋಚಿಸುವುದುಂಟು. ನನ್ನ ರಕ್ಷಣೆಗೆ ಗನ್ ಮ್ಯಾನ್ ಇರುವುದರಿಂದಾಗಿಯೇ ನಾನಿಂದು ಜೀವಂತವಾಗಿದ್ದೇನೆ ಎಂದು ಅನಿಸುವುದುಂಟು. ದೇಶದಲ್ಲಿ ಈ ರೀತಿಯ ವಾತಾವರಣ ನಿಜಕ್ಕೂ ಬೇಸರ ಮೂಡಿಸುತ್ತಿದೆ. ಇಂತಹ ವಾತಾವರಣ ದೇಶದಲ್ಲಿ ಹೊಸತೇನು ಅಲ್ಲ. ಕಳೆದ ನಾಲ್ಕು ದಶಕದಿಂದಲೂ ವಿಚಾರವಾದಿಗಳು ಇಂತಹ ವಾತಾವರಣವನ್ನು ಎದುರಿಸುತ್ತಿದ್ದಾರೆ. ಆದರೆ ಈ ರೀತಿಯ ವ್ಯವಸ್ಥಿತವಾದ ಕೊಲೆಯಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ. ಇದಕ್ಕೆ ಉನ್ನತ ಮಟ್ಟದಿಂದ ಬೆಂಬಲ ಇರುವುದರಿಂದಲೇ ಇದು ಸಾಧ್ಯವಾಗುತ್ತಿದೆ ಎಂಬುದು ನನ್ನ ಅನಿಸಿಕೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News