ಅನಧಿಕೃತ ಶಾಲೆ: ತನಿಖೆ ನಡೆಸಲು ಶಿಕ್ಷಣ ಇಲಾಖೆಗೆ ದೂರು

Update: 2018-09-22 15:00 GMT

ಬೆಂಗಳೂರು, ಸೆ. 22: ದಾಸನಪುರ ಹೋಬಳಿಯ ಮಾದನಾಯಕನಹಳ್ಳಿಯಲ್ಲಿ ವಿಶ್ವಗಾಣಿಗರ ಸಮುದಾಯದ ಚಾರಿಟೇಬಲ್ ಟ್ರಸ್ಟ್‌ನಿಂದ ಶಿಕ್ಷಣ ಇಲಾಖೆ ಅನುಮತಿ ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆರೆಸೆಸ್ಸ್ ಮಾಜಿ ಪ್ರಚಾರಕ ಹನುಮೇಗೌಡ ದೂರು ನೀಡಿದ್ದಾರೆ.

ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದು, ವಿಶ್ವಗಾಣಿಗ ಸಮುದಾಯ ಟ್ರಸ್ಟ್ ಸಂಸ್ಥೆ ಆಶ್ರಯದಲ್ಲಿನ ವಿಜಿಎಸ್ ಇಂಟರ್ ನ್ಯಾಷನಲ್ ಎಲೈಟ್ ಸ್ಕೂಲ್ ಅನುಮತಿಯ ಬಗ್ಗೆ ಪರಿಶೀಲಿಸಿ ವರದಿ ನೀಡಲು ನಿರ್ದೇಶನ ನೀಡಿದ್ದಾರೆಂದು ಹನುಮೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮೇಲ್ಕಂಡ ಟ್ರಸ್ಟ್‌ಗೆ ಸದಸ್ಯರಾಗಿದ್ದಾರೆ. ಅಲ್ಲದೆ, ಅವರ ವಿರುದ್ಧ ಭೂ ಒತ್ತುವರಿ ಆರೋಪವೂ ಕೇಳಿಬಂದಿದೆ. ಆದುದರಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನಧಿಕೃತ ಶಾಲೆಯನ್ನು ಕೂಡಲೇ ಮುಚ್ಚಿಸಿ, ಮುಗ್ಧ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹನುಮೇಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News