ಮೂವರು ಶಾಸಕರ ಚೆನ್ನೈ ಪ್ರಯಾಣ: ರಾಜಕೀಯ ಕುತೂಹಲ ಸೃಷ್ಟಿಸಿದ ರೆಸಾರ್ಟ್ ವಾಸ್ತವ್ಯ

Update: 2018-09-22 16:00 GMT

ಬೆಂಗಳೂರು, ಸೆ. 22: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಕ್ಷಣಕ್ಕೊಂದು ಬದಲಾವಣೆಗಳಾಗುತ್ತಿದ್ದು, ಜೆಡಿಎಸ್ ಶಾಸಕರು ಹಾಸನದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಚೆನ್ನೈನತ್ತ ಪ್ರಯಾಣ ಬೆಳೆಸಿ ಕುತೂಹಲ ಸೃಷ್ಟಿಸಿದ್ದಾರೆ.

ಕಾಂಗ್ರೆಸ್‌ನ ಶಾಸಕರಾದ ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ.ಸುಧಾಕರ್ ಹಾಗೂ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ಎಚ್.ನಾಗೇಶ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸಿನ ಮೂವರು ಶಾಸಕರು ಒಂದೇ ಕಾರಿನಲ್ಲಿ ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನೂ 11 ಅತೃಪ್ತ ಶಾಸಕರು ರವಿವಾರ ಮುಂಬೈಗೆ ತೆರಳುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದ್ದು, ಕಾಂಗ್ರೆಸ್ ಶಾಸಕರು ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆಂದು ಗೊತ್ತಾಗಿದೆ.

ಎಂಟಿಬಿ ನಾಗರಾಜ್ ಮತ್ತು ಡಾ.ಸುಧಾಕರ್, ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರ ಆಪ್ತರು. ಪಕ್ಷೇತರ ಶಾಸಕ ನಾಗೇಶ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ ಬಳಿಕ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮೂವರು ಶಾಸಕರ ಮೊಬೈಲ್‌ ಫೋನ್‌ಗಳು ಸ್ವಿಚ್ಡ್ ಆಫ್ ಆಗಿದ್ದು, ಅವರು ಚೆನ್ನೈನಿಂದ ನಾಳೆ(ಸೆ.23) ಬೆಳಗ್ಗೆ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳುವ ಸಾಧ್ಯತೆ ಇದೆ. ಹಲವು ಅತೃಪ್ತ ಶಾಸಕರು ಮುಂಬೈಗೆ ತೆರಳುವ ಸಾಧ್ಯತೆಯೂ ಇದೆ ಎಂದೂ ರಾಜಕೀಯ ವಲಯದಲ್ಲಿ ವದಂತಿ ಹಬ್ಬಿದೆ.

ಈ ಬೆಳವಣಿಗೆಗಳ ಮಧ್ಯೆ ಸಿಎಂ ಕುಮಾರಸ್ವಾಮಿ, ಶೃಂಗೇರಿ ಶಾರದಾಂಬೆ ದರ್ಶನ ಪಡೆದಿದ್ದು, ಇದೇ ವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಶಾಸಕರು ಮುಂಬೈಗೆ ತೆರಳಲಿದ್ದಾರೆಂಬ ಬಗ್ಗೆ ವಿಶೇಷ ಮಾಹಿತಿಯನ್ನು ಪಡೆದುಕೊಂಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆಂದು ಹೇಳಲಾಗಿದೆ.

ಮೂವರು ಕಾಂಗ್ರೆಸ್ ಶಾಸಕರು ತನ್ನ ಸಂಪರ್ಕದಲ್ಲೆ ಇದ್ದು, ಮುಂಬೈಗೆ ತೆರಳುವಂತೆ ತಾನೇ ಅವರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಸಚಿವ ಝಮೀರ್ ಅಹ್ಮದ್ ಅವರೊಂದಿಗೆ ಆಗಮಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದರು. ಅಲ್ಲದೆ, ತಾನು ಮುಂಬೈಗೆ ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಆನಂದ್‌ ಸಿಂಗ್ ಸ್ಪಷ್ಟಣೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News