"ಆಧುನಿಕ ತಂತ್ರಜ್ಞಾನದಿಂದ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ"

Update: 2018-09-22 16:48 GMT

ಬೆಂಗಳೂರು, ಸೆ.22: ಭೂಗೋಳಶಾಸ್ತ್ರ ಆಧುನಿಕ ತಂತ್ರಜ್ಞಾನವನ್ನು ಬಳಸಿ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಅಡ್ಡಿಯಿರುವ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು.

ಡೆಕ್ಕನ್ ಭೌಗೋಳಿಕ ಒಕ್ಕೂಟದ ಅಡಿಯಲ್ಲಿ ಸುಸ್ಥಿರ ಗ್ರಾಮೀಣ ಅಭಿವೃದ್ಧಿ-ಭೌಗೋಳಿಕ ಪರಿಹಾರ ಎಂಬ ವಿಷಯದ ಕುರಿತು ಭೂಗೋಳಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಉಪಗ್ರಹಗಳು ಅರಣ್ಯನಾಶ, ಬೆಳೆನಾಶ, ನೀರು ಮತ್ತು ಇತರೆ ಅಂಶಗಳ ಇತ್ತೀಚಿನ ಛಾಯಚಿತ್ರಗಳನ್ನು ನೀಡಿ ಸಂಪನ್ಮೂಲಗಳನ್ನು ಒದಗಿಸುವ ಆಗರವಾಗಿದೆ. ಆದರೆ, ಹಲವಾರು ಕೊರತೆಗಳನ್ನು ಇದು ಎದುರಿಸುತ್ತಿವೆ. ಹೀಗಾಗಿ, ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಸಂಪನ್ಮೂಲಗಳನ್ನು ನೀಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದರು.

ಭೂಗೋಳಶಾಸ್ತ್ರದ ಪ್ರಾಧ್ಯಾಪಕ ಡಾ. ಅಶೋಕ್ ಡಿ.ಅಂಜಗಿ ಮಾತನಾಡಿ, ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಸಮರ್ಥಿಸುವ ವಿಧಾನಗಳ ಸಲುವಾಗಿ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿ ಚರ್ಚಿಸಬೇಕಾಗಿದೆ. ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವೈ.ವಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಜಲ ಸಂಪನ್ಮೂಲ ಮತ್ತು ನೈಸರ್ಗಿಕ ವಿಕೋಪ ಜನಸಂಖ್ಯಾ ಬೆಳವಣಿಗೆ ಮತ್ತು ಸಮಸ್ಯೆಗಳು, ಬರನಿರ್ವಹಣೆ ಅಂತರ್ಜಲ ಬೆಳವಣಿಗೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತು ಭೂಗೋಳಶಾಸ್ತ್ರದ ಮಹತ್ವದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ, ಗ್ರಾಮೀಣ ಭಾಗಗಳ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪಗಳಲ್ಲಿ ಭೌಗೋಳಿಕ ಮಹತ್ವವನ್ನು ವಿವರಿಸಿದರು.

ಭೂಮೇಲ್ಮೈ ನೀರಿನ ಲಭ್ಯತೆ, ವಿತರಣೆ ಮತ್ತು ಅದರ ಕೊಡುಗೆಗಳನ್ನು ಚರ್ಚಿಸಿದರು. ನೀರಿನ ಕೊರತೆಯ ಸಮಸ್ಯೆಗಳ ಬಗ್ಗೆ ನಿರ್ದಿಷ್ಟವಾಗಿ ಅಂತರ್ಜಲಕ್ಕೆ ಸಂಬಂಧಿಸಿದಂತೆ ಮತ್ತು ನೀರನ್ನು ಬಳಸಿಕೊಳ್ಳುವ ಸೂಕ್ತವಾದ ಮಾರ್ಗಗಳ ಬಗ್ಗೆ ಸೂಚಿಸಿದರು. ಅನಂತರ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ದತ್ತಾಂಶಗಳ ಬಳಕೆಗಾಗಿ ಭುವನ್ ಪೋರ್ಟಲ್ ಅನ್ನು ಪ್ರವೇಶಿಸಲು ಮತ್ತು ಬಳಸಿಕೊಳ್ಳಲು ಮಾರ್ಗದರ್ಶಿ ಸೂತ್ರಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರೊ.ಎ.ಎಸ್.ರಾಯಮಾನೆ, ಕುಲಸಚಿವ ಪ್ರೊ.ಬಿ.ಕೆ.ರವಿ, ಪ್ರೊ.ಅಶೋಕ್ ಡಿ ಅಂಜಗಿ, ಪ್ರೊ.ಬರ್ಕಥುಲ್ಹಾಖಾನ್, ಪ್ರೊ, ಬಿ.ಸಿ. ವೈದ್ಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಒಕ್ಕೂಟವು ಪ್ರಕಟಿಸುತ್ತಿರುವ ಎರಡು ಸಂಶೋಧನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News