ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಬಯೋಡೀಸೆಲ್ ಬಳಕೆಗೆ ಚಿಂತನೆ

Update: 2018-09-22 17:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.22: ದಿನದಿಂದ ದಿನಕ್ಕೆ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪರಿಸರ ಮಾಲಿನ್ಯವನ್ನು ಅಲ್ಪಮಟ್ಟಿಗಾದರೂ ತಡೆಗಟ್ಟುವ ಸಲುವಾಗಿ ಡೀಸೆಲ್ ಬಳಕೆ ಜತೆಗೆ ಜೈವಿಕ ಇಂಧನ ಬಳಕೆ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಚಿಂತನೆ ನಡೆಸಿದೆ.

ಕೆಎರ್ಸ್ಸಾಟಿಸಿ 8750 ಬಸ್‌ಗಳು ನಿತ್ಯ 6 ರಿಂದ 7 ಲಕ್ಷ ಲೀಟರ್ ಡೀಸೆಲ್ ಕುಡಿಯುತ್ತಿದ್ದು, ಈ ಪೈಕಿ ಕನಿಷ್ಠ 220 ಬಸ್‌ಗಳಿಗೆ ಸಂಪೂರ್ಣ ಅಥವಾ ಭಾಗಶಃ ಬಯೋ ಡೀಸೆಲ್ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಎಸ್ಸಾರ್ಟಿಸಿಗೆ ಬಯೋ ಡೀಸೆಲ್ ಪೂರೈಕೆ ಮಾಡಲು ಇತ್ತೀಚಿಗೆ ಕೆಲವು ಕಂಪನಿಗಳು ಆಸಕ್ತಿ ತೋರಿದ್ದು, ಅದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಒಂದು ವೇಳೆ ಅವರು ಸಮಂಜಸವಾದ ದರಕ್ಕೆ ಉತ್ತಮ ಗುಣಮಟ್ಟದ ಬಯೋಡೀಸೆಲ್ ಪೂರೈಕೆ ಮಾಡಲು ಒಪ್ಪಿದರೆ ಆದಷ್ಟು ಬೇಗ ಬಯೋ ಡೀಸೆಲ್ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದಿದ್ದಾರೆ.

ಕೆಎಸ್ಸಾರ್ಟಿಸಿ ಈಗಾಗಲೇ 220 ಬಸ್‌ಗಳಲ್ಲಿ ಬಯೋ ಡೀಸೆಲ್ ಕಿಟ್‌ಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 20 ಬಸ್‌ಗಳಿಗೆ ಸಂಪೂರ್ಣ ಬಯೋ ಡೀಸೆಲ್ ಹಾಗೂ 200 ಬಸ್‌ಗಳಿಗೆ ಭಾಗಶಃ ಬಯೋಡೀಸೆಲ್ ಬಳಸಲಾಗುವುದೆಂದು ನಿರ್ಧರಿಸಲಾಗಿದೆ.

ಡೀಸೆಲ್ ಜೊತೆಗೆ ಶೇ.20ರಷ್ಟು ಬಯೋಡೀಸೆಲ್ ಮಿಶ್ರಣ ಮಾಡಿ ಪ್ರತಿ ಲೀಟರ್‌ಗೆ 5 ರೂ.ಉಳಿಸಿ ಬಸ್‌ಗಳನ್ನು ಓಡಿಸಲು ತಯಾರಿ ನಡೆಸಲಾಗಿದ್ದು, ಈ ಸಂಬಂಧ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

2015ರ ಅಕ್ಟೋಬರ್ 2ರಂದು 10 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಬಯೋಡೀಸೆಲ್ ಬಳಸಲಾಗಿತ್ತು. ಬಯೋಡೀಸೆಲ್ ತಾಂತ್ರಿಕ ಕಾರ್ಯಕ್ಷಮತೆ, ಎಂಜಿನ್ ಕಾರ್ಯಕ್ಷಮತೆ ಮತ್ತು ಮಾಲಿನ್ಯ ಪ್ರಮಾಣದ ಬಗ್ಗೆ ತಜ್ಞರ ತಂಡದಿಂದ ಮೌಲ್ಯಮಾಪನ ಮಾಡಿಸಲಾಗಿತ್ತು. ಇವರು ನೀಡಿದ ವರದಿಯ ಆಧಾರದ ಮೇಲೆ ಈಗ ಹೆಚ್ಚಿನ ಬಸ್‌ಗಳಲ್ಲಿ ಬಯೋ ಡೀಸೆಲ್ ಬಳಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News