ಕ್ಯಾನ್ಸರ್ ತಡೆಗೆ ಆಹಾರ ಪದ್ಧತಿ ಬಗ್ಗೆ ಜಾಗೃತಿ ಅಗತ್ಯ: ಪರಿಷತ್ ಮಾಜಿ ಸದಸ್ಯೆ ತಾರಾ ಅನೂರಾಧ

Update: 2018-09-22 17:04 GMT

ಬೆಂಗಳೂರು, ಸೆ. 22: ಕ್ಯಾನ್ಸರ್ ಅನ್ನು ತಡೆಗಟ್ಟಲು ಮತ್ತು ಅದು ಮತ್ತೆ ಬರದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತವಾದ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳು ಪ್ರಮುಖ ಪಾತ್ರ ವಹಿಸುವ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನೂರಾಧ ಪ್ರತಿಪಾದಿಸಿದ್ದಾರೆ.

ಶನಿವಾರ ಇಲ್ಲಿನ ಕೆಂಗೇರಿಯಲ್ಲಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ಕ್ಯಾನ್ಸರ್‌ನಿಂದ ಗುಣಮುಖರಾದವರನ್ನು ಒಂದೆಡೆ ಸೇರಿಸಿ ‘ಐಯಾಮ್ ಫೈನ್- ಬ್ಯಾಕ್ ಟು ಲೈಫ್’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉತ್ತಮ ಆಹಾರ ಸೇವಿಸಿ, ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂಬುದರ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ವೇಳೆ ಕ್ಯಾನ್ಸರ್ ರೋಗವನ್ನು ಗೆದ್ದು ಬಂದಿರುವವರಿಗೆ ಸನ್ಮಾನ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ಆಸ್ಪತ್ರೆಯ ವೈದ್ಯ ಡಾ.ಮಾತಂಗಿ ಮಾತನಾಡಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದು ಎಚ್ಚರಿಕೆ ಗಂಟೆಯಾಗಿದೆ. ಭಾರತದಲ್ಲಿ ಬಹುತೇಕ ಕ್ಯಾನ್ಸರ್ ರೋಗಗಳು ಧೂಮಪಾನ ಮತ್ತು ಧೂಮರಹಿತ ತಂಬಾಕು ಉತ್ಪನ್ನಗಳ ಸೇವನೆಯಿಂದ ಬರುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಈ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಗುಣಮುಖರನ್ನಾಗಿ ಮಾಡಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News