ಸಂವಿಧಾನ ನೀಡಿರುವ ಹಕ್ಕುಗಳೇ ನೆಮ್ಮದಿಯಾಗಿ ಜೀವಿಸಲು ಕಾರಣ: ನ್ಯಾ.ನಾಗಮೋಹನ್‌ದಾಸ್

Update: 2018-09-22 17:06 GMT

ಬೆಂಗಳೂರು, ಸೆ.22: ಭಾರತ ಗಣರಾಜ್ಯವಾಗಿ 68 ವರ್ಷ ಕಳೆದಿದೆ. ಅದಕ್ಕೆ ಕಾರಣ ನಮ್ಮ ಲಿಖಿತ ಸಂವಿಧಾನ. ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರರು, ಹಿಂದುಗಳು, ರೈತರು ಸೇರಿದಂತೆ ಎಲ್ಲ ವರ್ಗದವರೂ ನೆಮ್ಮದಿಯಾಗಿ ಬದುಕುವುದಕ್ಕೆ ಸಂವಿಧಾನ ನೀಡಿರುವ ಹಕ್ಕುಗಳೇ ಕಾರಣ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ಓದು ಅಭಿಯಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಹೀಗೆ ಒಂದೊಂದು ಧರ್ಮಕ್ಕೂ ಒಂದೊಂದು ಧರ್ಮ ಗ್ರಂಥವಿದೆ. ಅದರಂತೆ ಅಖಂಡ ಭಾರತೀಯರಿಗೆ ಸಂವಿಧಾನವೇ ಧರ್ಮ ಗ್ರಂಥ ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಅನೇಕ ಧರ್ಮೀಯರು, ಅನೇಕ ಜಾತಿಗಳು, ಅನೇಕ ಸಂಸ್ಕೃತಿ ಒಂದಾಗಿ ಬದುಕುತ್ತಿವೆ. ಇದಕ್ಕೆಲ್ಲಾ ಮೂಲಕಾರಣ ಸಂವಿಧಾನ. ಆದರೆ, ಇಂದು ಸಂವಿಧಾನವನ್ನೇ ನಾಶ ಪಡಿಸಿ, ಮೂಲಭೂತವಾದ, ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ನಾವು ಐಕ್ಯತೆ ಪ್ರದರ್ಶಿಸಬೇಕು. ಇಲ್ಲದಿದ್ದರೆ, ಮತ್ತೊಮ್ಮೆ ಗುಲಾಮರಂತೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಶ್ವದಲ್ಲಿ ಹಲವಾರು ರಾಷ್ಟ್ರಗಳು ಸ್ವಾತಂತ್ರ ಪಡೆದಿದ್ದರೂ, ಎಲ್ಲವೂ ಗಣರಾಜ್ಯ ದೇಶಗಳಾಗಿಲ್ಲ. ಲಿಖಿತ ಸಂವಿಧಾನವನ್ನು ರೂಪಿಸಿ, ಅದನ್ನು ಒಪ್ಪಿಕೊಂಡು, ಅದರ ಪ್ರಕಾರ ಸರಕಾರ ರಚನೆ ಮಾಡಿ ಆಡಳಿತ ನಡೆಸಿದಾಗ ಗಣರಾಜ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮಗಿಂತಲೂ ಮೊದಲು ಸ್ವಾತಂತ್ರ ಪಡೆದ ಇಂಗ್ಲೆಂಡ್‌ಗೆ ಇದುವರೆಗೂ ಲಿಖಿತವಾದ ಒಂದು ಸಂವಿಧಾನವಿಲ್ಲ. ಹೀಗಾಗಿ, ಅದು ಸ್ವತಂತ್ರ ದೇಶವಾಗಿದ್ದರೂ, ಗಣರಾಜ್ಯವಾಗಿಲ್ಲ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ ಸಿಕ್ಕಿ ಏಳು ದಶಕಗಳಾದರೂ ನಿರುದ್ಯೋಗ, ಬಡತನ ಮೊದಲಾದ ಸಮಸ್ಯೆಗಳು ನಿವಾರಣೆಯಾಗಿಲ್ಲ. ಎಲ್ಲರಿಗೂ ಸಮರ್ಪಕ ಸವಲತ್ತುಗಳು ದೊರೆತಿಲ್ಲ. ಹಾಗಂತಾ ಅದಕ್ಕೆ ಸಂವಿಧಾನ ಕಾರಣವಲ್ಲ. ಆಳುವ ವರ್ಗ ಸಂವಿಧಾನದ ಸಮರ್ಪಕ ಅನುಷ್ಠಾನದಲ್ಲಿ ವಿಫಲವಾಗಿರುವುದರಿಂದ ಸಮಸ್ಯೆಗಳು ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ಆಶಾಭಾವವಿದೆ. ಅಂತೆಯೆ ಈ ಸಮಸ್ಯೆಗಳ ಜತೆಗೆ ಭಯೋತ್ಪಾದನೆ, ಉಗ್ರವಾದ, ಕೋಮುವಾದ, ಭ್ರಷ್ಟಾಚಾರವೂ ದೇಶಕ್ಕೆ ದೊಡ್ಡ ಕಂಟಕವಾಗಿವೆ. ಈ ಸವಾಲುಗಳ ವಿರುದ್ಧವೂ ಹೋರಾಡಬೇಕಿದೆ ಎಂದು ಅವರು ಕರೆ ನೀಡಿದರು.

ಇಂದು ದೇಶದಲ್ಲಿ ಆರ್ಥಿಕ-ಸಾಮಾಜಿಕ ಭಯೋತ್ಪಾದನೆ ನಡೆಯುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಜನರ ಚಿಂತನೆಯ ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದಲ್ಲಿಂದು ಕೆಲವರು ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ಸಂವಿಧಾನ ಬದಲಾಯಿಸುವ ಮಾತಾಡುತ್ತಿದ್ದಾರೆ. ಒಂದು ವೇಳೆ ಸಂವಿಧಾನ ಬದಲಾವಣೆಯಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ಅರಾಜಕತೆ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಸಂವಿಧಾನ ಸುಡುವ, ತಿರುಚುವುದಾಗಿ ಹೇಳುತ್ತಿರುವವರು ವಾಸ್ತವದಲ್ಲಿ ಭಾರತದ ಸಂವಿಧಾನ ಓದಿ ಅರ್ಥೈಸಿಕೊಂಡಿಲ್ಲ. ಈ ದೇಶವನ್ನು ಅರ್ಥೈಸಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ಸಂವಿಧಾನ ಓದಬೇಕು ಎಂದು ಸಲಹೆ ನೀಡಿದರು.

ಭಾರತ ಮಾತ್ರವಲ್ಲ ವಿಶ್ವದ 194 ದೇಶಗಳು ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಯಸಿ ತಮ್ಮದೇ ಆದ ಸಂವಿಧಾನವನ್ನು ಹೊಂದಿದೆ. ಭಾರತವು ತಂತ್ರಜ್ಞಾನ, ವಿಜ್ಞಾನ, ಭದ್ರತೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ವಿಶ್ವದ 10 ಅತ್ಯುತ್ತಮ ರಾಷ್ಟ್ರಗಳ ಪಟ್ಟಿಯಲ್ಲಿ ಒಂದಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಅಖಂಡ ಭಾರತ ಗಣರಾಜ್ಯವಾಗಿದ್ದು, ಸಂವಿಧಾನವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದೆ. ನಮ್ಮ ಎಲ್ಲ ಕಾನೂನುಗಳ ತಾಯಿ ಸಂವಿಧಾನವಾಗಿದ್ದು, ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲಾ, ನ್ಯಾಷನಲ್ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಎಸ್.ಎನ್.ನಾಗರಾಜರೆಡ್ಡಿ, ಪ್ರೊ.ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದೇಶದಲ್ಲಿ ಸಾವಿರಾರು ಕಾಯ್ದೆ-ಕಾನೂನುಗಳಿವೆ. ಅವುಗಳಿಗೆಲ್ಲಾ ಸಂವಿಧಾನವೇ ತಾಯಿ. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ, ಅರ್ಥೈಸಿಕೊಳ್ಳಬೇಕು. ಸಂವಿಧಾನ ಒಂದು ಕಾದಂಬರಿ ಅಥವಾ ಕವಿತೆಯಲ್ಲ. ಅದು ದೇಶವನ್ನು ಮುನ್ನಡೆಸುವ ಒಂದು ಕಾರ್ಯಕ್ರಮವಾಗಿದೆ. ಸಂವಿಧಾನ ಅರ್ಥ ಮಾಡಿಕೊಳ್ಳದೇ ದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶ ಅರ್ಥ ಮಾಡಿಕೊಳ್ಳಬೇಕಾದರೆ, ದೇಶದ ಇತಿಹಾಸ ಅರ್ಥ ಮಾಡಿಕೊಳ್ಳಬೇಕು.

-ಎಚ್.ಎನ್.ನಾಗಮೋಹನ್‌ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News