ಅಂಡಮಾನ್ ಕಂಡ ಹಾಗೆ

Update: 2018-09-22 17:27 GMT

‘ಅಂಡಮಾನ್ ಕಂಡ ಹಾಗೆ’ ಡಾ.ಎಚ್.ಎಸ್. ಅನುಪಮಾರವರ ಪ್ರವಾಸಕಥನ. ಅನುಭವಕೊಡುವ ಪಾಠ ಬಲುದೊಡ್ಡದು. ಅನುಭವ ಅಂದರೆ ಅನುಭೂತಿ. ಅವಗಳನ್ನು ಬರಹಗಾರನೊಬ್ಬ ಸಾಧ್ಯಂತ ಅದೇ ರೀತಿಯಲ್ಲಿ ಓದುಗನಿಗೆ ಬಡಿಸುತ್ತಾನೆ. ಅದು ಓದುಗನನ್ನು ಅತ್ತ, ಎತ್ತಲೋ ಕೊಂಡೊಯ್ಯುತ್ತದೆ.ಅದು ಅನುಭವ ದಾಖಲಿಸುವವರ ತಾಕತ್ತಿನಲ್ಲಿದೆ. ಅಂಥಹದ್ದರಲ್ಲಿ ಅನುಪಮಾ ಅವರ ಪಯಣದ ಅನುಭವ ವಿಶೇಷ ಮತ್ತು ಸುಂದರ. ಸರಳ ಭಾಷೆ, ವಿಶೇಷ ಚಿಂತನೆಯೊಂದಿಗೆ ಸಾಗುವ ಅವರ ಬರಹಗಳು ನಮ್ಮನ್ನೂ ಅವರೊಂದಿಗಿದ್ದ ಅನುಭವವನ್ನು ಉಣಬಡಿಸುತ್ತದೆ.

ಅಂಡಮಾನಿನಲ್ಲಿ ಕಂಡ ಬದುಕು, ಜೀವನ ಶೈಲಿ, ಸಂಸ್ಕೃತಿ, ಕಲೆಗಳನ್ನೆಲ್ಲಾ ಕಟ್ಟಿಕೊಡುವ ಪ್ರಯತ್ನದಲ್ಲಿ ಲೇಖಕಿ ಇಲ್ಲಿ ಗೆಲುವಾಗುತ್ತಾರೆ.ಇಂದಿಗೂ ವಿಶೇಷವಾಗಿಯೇ ಉಳಿದ ಈ ದ್ವೀಪದ ಒಳಗನ್ನು ಮನೋಜ್ಞಾವಾಗಿ ಕೃತಿಯಲ್ಲಿ ತೆರೆದಿಟ್ಟ ಪ್ರಯತ್ನಗಳನ್ನು ಮನಗಾಣಬಹುದು. ಹಲವಾರು ಜನಾಂಗಗಳಾಗಿ ಹಂಚಿ ಹೋಗಿರುವ ಅಂಡಮಾನ್ ಜನತೆಯ ಜನಾಂಗಗಳನ್ನು ಪರಿಚಯಿಸುತ್ತಾ ನಾಗರಿಕತೆಯ ನೆರಳು ಕೂಡಾ ಸೋಂಕದೆ, ಬೆಂಕಿ ಉಪಯೋಗ ತಿಳಿಯದೆ, ವಾಹನಗಳು ಗೊತ್ತಿಲ್ಲದೆ, ವೈದ್ಯರ ಅಗತ್ಯವೂ ಬರದೆ, ಆಧುನಿಕತೆಯ ಪರಿಕಲ್ಪನೆಯಿಲ್ಲದೆ ಬಾಳು ಸವೆಸುವ ಜನಾಂಗದ ಕುರಿತು ಹೇಳುತ್ತಾ ಲೇಖಕಿ ವಿಸ್ಮಯ ವಿಚಾರದತ್ತ ಪಯಣಿಸುತ್ತಾರೆ. ಮುಖ್ಯವಾಗಿ ಅಂಡಮಾನಿನ ಜರವಾಗಳು, ವಿನಾಶದಂಚಿಗೆ ತಲುಪಿದ ಜರವಾಗಳು ಇರುವುದೇ ಒಟ್ಟು ಇನ್ನೂರ ಐವತ್ತು ಮಂದಿ. ನಾಗರಿಕನ ಜೊತೆಗಿನ ಸಂಘರ್ಷಗಳಲ್ಲೂ ಜರವಾಗಳನ್ನು ಕಾಣಬಹುದು. ಆಧುನಿಕ ವೈದ್ಯಲೋಕದ ಚಿಂತನೆಯೇ ಇನ್ನೂ ಮೂಡದೆ ಹಲವು ಕಾಲವನ್ನು ಜರವಾಗಳು ದಾಟಿ ಬಂದ ವಿಚಾರ ಮಾತ್ರ ವಿಶೇಷ. ಹಲವಾರು ಪಂಗಡಗಳಿಗೆ ಹರಿದು ಹಂಚಾಗಿ ಹೋದ ಬುಡಕಟ್ಟು ಜನಾಂಗಗಳು ಅಂಡಮಾನಿನಲ್ಲಿಕಾಣಲುಸಾಧ್ಯ. ಅಂಡಮಾನ್‌ರಾಜಧಾನಿ ಫೋರ್ಟ್ ಬ್ಲೇರಿನ ಬಗ್ಗೆಯೇ ಬರಹವೊಂದು ಕೃತಿಯಲ್ಲಿದೆ. ದಂಗೆಗೆ ಇಂಬುಕೊಟ್ಟವರು, ಸರಕಾರವನ್ನುಎದು ಹಾಕಿಕೊಂಡವರು, ತಮಗೆ ಅಪಥ್ಯವಾದವರನ್ನು ಬ್ರಿಟಿಷ್ ಸರಕಾರ ಈ ದ್ವೀಪದಲ್ಲಿ ಬಂದಿಯಾಗಿಸಿತು. ಇಲ್ಲಿಂದ ಮೊದಲ್ಗೊಂಡು ಹಲವು ಬಾರಿ ನಾಗರಿಕ ಮತ್ತು ಬುಡಕಟ್ಟು ಪಂಗಡಗಳು ಎದುರಾಗಿ, ಹೊಡೆದಾಡಿಕೊಂಡದ್ದಿದೆ.ಅಂಡಮಾನಿನ ಕೊನೆಯ ಕೊಂಡಿಯೆಂದು ಲೇೀಖಕಿಯ ಪ್ರತ್ಯೇಕ ಬರಹದಲ್ಲಿ ಅಳಿವಿನಂಚಿನಲ್ಲಿರುವ ನಾಗರಿಕಜಗತ್ತಿಗೆ ಸವಾಲೊಡ್ಡಿ ಬಾಳು ಕಟ್ಟಿದ ಹಲವು ಬುಡಕಟ್ಟು ಕುಲಗಳು ಬದುಕನ್ನು ಕಟ್ಟಿದ ಬಗ್ಗೆ ಮಾತಿಗಿಳಿಯುತ್ತಾರೆ.

ಈಗ ಇರುವ 3.5 ಲಕ್ಷಜನರಲ್ಲಿ ಶೇ.0.5 ಮೂಲನಿವಾಸಿಗಳಾದರೆ ಶೇ.99.5 ವಲಸಿಗರೇ ತುಂಬಿಕೊಂಡಿದ್ದಾರೆ. ಸ್ವಂತ ನೆಲವನ್ನು ಮೂಲವಾಸಿಗಳು ಕಳೆದುಕೊಳ್ಳವ ಬೇಸರ ಲೇಖಕಿಯವರ ವಿವರಣಾ ಶೈಲಿಯಲ್ಲೇ ಅಂದಾಜಿಸಬಹುದು. ಆದಿ ಬುಡಕಟ್ಟು ಜನಾಂಗದ ಕೊನೆಯ ಕೊಂಡಿಯೆಂಬಂತೆ ಉಳಿದಿರುವ ಈ ವಿಶೇಷ ಜೀವನ ಶೈಲಿ ಯಾರೊಬ್ಬರನ್ನು ಅಚ್ಚರಿಗೊಳಿಸದಿರದು. ಅವರಿಗೆಎಲ್ಲವೂ ಪ್ರಕೃತಿಯೇ.ಅಲ್ಲಿಅವರಿಗೆಯಂತ್ರ, ವಾಹನ, ತಂತ್ರಜ್ಞಾನದ ಹಂಗಿಲ್ಲ. ಆಧುನಿಕಜಗತ್ತಿನ ಸವಲತ್ತಿನ ನಮ್ಮ ಬದುಕಿನ ಮುಂದೆ ಅವರದು ವಿಶೇಷ ಅನ್ನದಿರಲು ಸಾಧ್ಯವೆಂತು? ಹೀಗೆ ವಿಶೇಷ ಅಭಿವ್ಯಕಿಯೊಂದಿಗೆ ಲೇಖಕಿ ಪರಿಣಾಮಕಾರಿಯಾಗಿ ಅಂಡಮಾನಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಪೋಣಿಸಿದ್ದಾರೆ.

ಅವರ ಬಗೆಗಿನ ಅಭಿಮಾನ, ಕಾಳಜಿಯನ್ನು ಕೃತಿಯುದ್ದಕೂದರ್ಶಿಸಲು ಸಾಧ್ಯ. ನಾಗರಿಕ ಜಗತ್ತಿಗೆ ವ್ಯತಿರಿಕ್ತ, ವಿಶೇಷವಾದ ಅವರ ಬದುಕಿನ ಬಗೆಗಿರುವ ಅಭಿಮಾನವಾದರೆ, ಅಳಿವಿನತ್ತ ಮುಖ ಮಾಡಿದ ಬಗೆಗಿನ ಕಾಳಜಿ, ನೋವೂ ಇದೆ. ಸೆಲ್ಯುಲರ್‌ಜೈಲು ತನ್ನೊಳಗೆ ಉಳಿಸಿಕೊಂಡ ಕೆಲವು ಸತ್ಯಗಳನ್ನು ಇಲ್ಲಿ ಅನಾವರಣಗೊಳಿಲಾಗಿದೆ. ಜರವಾ, ಗ್ರೇಟ್ ಅಂಡಮಾನಿಗಳು, ಒಂಗೇ, ಶೋಂಪೇನರು, ನಿಕೋಬಾರಿಗಳು, ಕಕೇನರು ಹೀಗೆ ಭಿನ್ನ ಬುಡಕಟ್ಟುಗಳ ಚರ್ಚೆಗೆ ಪುಸ್ತಕವು ವೇದಿಕೆಯಾಗಿದೆ. ಒಟ್ಟಿನಲ್ಲಿ ಕಳೆದುಹೋಗುತ್ತಿರುವ ಅಂಡಮಾನಿನ ವಿಶಿಷ್ಟ ಬದುಕಿನ ಬಗೆ, ಆಚಾರಗಳ ಸುತ್ತೆಲ್ಲಾ ಲೇಖಕಿಯು ಓದುಗರನ್ನು ಒಯ್ಯುತ್ತಾರೆ. ನಾಗರಿಕ ಜಗತ್ತಿನ ಭಯ, ಸುನಾಮಿಗಳನ್ನು ಎದುರಿಸಿ ಬದುಕಿರುವ ಸೆಂಟಿನೇಲಿಯರಿಗೆ ಪುಸ್ತಕ ಅರ್ಪಿತವಾಗಿದೆ. ಅಂದಹಾಗೆ, ನಮ್ಮನ್ನು ನಮಗರಿವಿಲ್ಲದಂತೆಯೇ ಅಂಡಮಾನಿನ ಹಾದಿ ಹಿಡಿಸುವಲ್ಲಿ ಈ ಕೃತಿಯಶವಾಗುತ್ತದೆ. ಪುಟತಿರುವಿ ಹಾಕಿದಂತೆಯೇ ಹೊಸ ವಿಚಾರಗಳ ದರ್ಶನವಾಗುತ್ತಾ ಸಾಗುತ್ತದೆ. ಕೊನೆಗೆಂಬಂತೆ ಅಂಡಮಾನಿನ ನೆನಪು ಮತ್ತು ಮಾಹಿತಿ ಬರಹದಲ್ಲಿ ಅಂಡಮಾನಿನ ಕಿರುಚಿತ್ರಣ ಅಡಗಿದೆ.ತಾನು ಮಾತಿಗಿಳಿದ ಜನರ ಒಳಗಿದ್ದ ತುಮುಲ, ವಿಶ್ವಾಸ, ನಂಬಿಕೆಗಳನ್ನೆಲ್ಲಾ ವಿಶೇಷ ಶೈಲಿಯಲ್ಲಿ ವಿವರಿಸಿದ್ದಾರೆ. ಒಟ್ಟಿನಲ್ಲಿ ಕೃತಿ ಸೂಪರ್, ಅಮೇಝಿಂಗ್. ಓದಿಕೊಳ್ಳಿ.

Writer - ಎ. ರಹ್ಮಾನ್ ಕಕ್ಯಪದವು

contributor

Editor - ಎ. ರಹ್ಮಾನ್ ಕಕ್ಯಪದವು

contributor

Similar News