ಪಕ್ಷದೊಳಗೆ ನನಗೆ ಯಾರೂ ಶತ್ರುಗಳಿಲ್ಲ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ

Update: 2018-09-23 13:05 GMT

ಬೆಂಗಳೂರು, ಸೆ. 23: ನಮ್ಮ ಪಕ್ಷದೊಳಗೆ ಈಗ ನನಗೆ ಯಾರೂ ಶತ್ರುಗಳಿಲ್ಲ. ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ಬೆಳಗಾವಿ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ಹಿರಿಯ ನಾಯಕರ ಮಧ್ಯಪ್ರವೇಶದಿಂದ ಎಲ್ಲವೂ ಸರಿಯಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಲಾಂಚನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಘಟಕದ ಲಾಂಛನ ಬಿಡುಗಡೆ ಮಾಡಿದ್ದು, ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಸಜ್ಜುಗೊಳ್ಳುತ್ತಿದ್ದೇವೆ ಎಂದರು.

ರಾಜಕೀಯ ಎಂದಿಗೂ ನಿಂತ ನೀರಲ್ಲ. ಅದು ಹರಿವ ನೀರು. ನಾನು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನ ಕೇಳುವಷ್ಟು ಬಾಲಿಷ ಹೇಳಿಕೆ ನೀಡುವುದಿಲ್ಲ. ಆದರೆ, ಅವಕಾಶವಿದ್ದ ಕಾರಣಕ್ಕೆ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದೆ. ನನ್ನ ಕೆಲಸವನ್ನು ಗುರುತಿಸಿ ಹೈಕಮಾಂಡ್ ಜವಾಬ್ದಾರಿ ನೀಡುವ ಭರವಸೆ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇರುವುದರಿಂದ ಕೆಲ ಗೊಂದಲಗಳಿದ್ದು, ಈ ವೇಳೆ ಮಹಿಳೆಯರಿಗೆ ಸಚಿವ ಸ್ಥಾನ ಕೇಳುವುದು ಸರಿಯಲ್ಲ. ನಾವು ಮಹಿಳೆಯರು ತ್ಯಾಗಮಯಿಗಳು. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ ಎಂದು ಅವರು ಹೇಳಿದರು.

‘ಪ್ರಧಾನಿ ಮೋದಿಯವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದು, ಇದರಿಂದ ದೇಶದ ಜನ ಬೇಸತ್ತಿದ್ದಾರೆ. ಅವರು ನೀಡಿರುವ ಯಾವುದೇ ಭರವಸೆ ಈಡೇರಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’

-ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News