ಪ್ರಾಧ್ಯಾಪಕರು-ವೈದ್ಯರು ಬಂಡವಾಳಶಾಹಿಗಳ ಗುಲಾಮರು: ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2018-09-23 12:16 GMT

ಬೆಂಗಳೂರು, ಸೆ.23: ದೇಶದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವು ಬಂಡವಾಳಶಾಹಿಗಳ ಹಿಡಿತದಲ್ಲಿದ್ದು, ಪ್ರಾಧ್ಯಾಪಕರು-ವೈದರು ಗುಲಾಮರ ರೀತಿಯಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದ್ದಾರೆ.

ರವಿವಾರ ವಸಂತ ಪ್ರಕಾಶನ ನಗರದ ಕಸಾಪದ ಅಕ್ಕಮಹಾದೇವಿ ಸಭಾಂಗಣದಲ್ಲಿ ಆರೋಗ್ಯ ಚಿಂತನ ಮಾಲಿಕೆಯ 2ನೆ ಕಂತಿನ 9ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಶಿಕ್ಷಣ ಹಾಗೂ ಆರೋಗ್ಯವು ಜನಪರ ಸಮಾಜ ರಚನೆಯ ವಿನ್ಯಾಸವನ್ನು ರೂಪಿಸುವ ಕ್ಷೇತ್ರವಾಗಿತ್ತು. ಆದರೆ, ಈಗ ವಾಣಿಜ್ಯೀಕರಣಗೊಂಡ ಹಣ ಮಾಡುವ ಉದ್ಯಮವಾಗಿ ಪರಿವರ್ತಿನೆಗೊಂಡಿವೆ ಎಂದು ತಿಳಿಸಿದರು.

ಇವತ್ತು ವೈದ್ಯರು ರೋಗಿಗಳಿಗೆ ಯಾವ ಮಾತ್ರ ಕೊಡಬೇಕು ಹಾಗೂ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಏನನ್ನು ಹೇಳಿಕೊಡಬೇಕೆಂದು ನಿರ್ಧರಿಸುವಂತಹ ಅಧಿಕಾರ ಇಲ್ಲವಾಗಿದೆ. ಜನಪ್ರತಿನಿಧಿಗಳ ಮೂಲಕ ಬಂಡವಾಳಶಾಹಿಗಳು ಎಲ್ಲವನ್ನು ನಿರ್ಧರಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಂಬಿಬಿಎಸ್ ಪದವಿ ಪಡೆಯಬೇಕಾದರೆ ಕನಿಷ್ಟ 5 ಕೋಟಿ ರೂ. ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. ಇಷ್ಟು ಹಣ ಖರ್ಚು ಮಾಡಿ ವೈದ್ಯರಾದವರು, ಬಡವರು, ಶ್ರೀಮಂತರೆನ್ನದೆ ಹಣವನ್ನು ಲೂಟಿ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ಬೃಹತ್ ಆಸ್ಪತ್ರೆಗಳಿಂದ ದೂರವಿರಬೇಕೆಂದು ಅವರು ಹೇಳಿದರು.

ಹಿರಿಯ ವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ಇವತ್ತು ಸಮಾಜದಲ್ಲಿ ಶೇ.35ರಷ್ಟು ಜನತೆಗೆ ರಕ್ತದೊತ್ತಡ, ಶೇ.25ರಷ್ಟು ಮಧುಮೇಹ, ಶೇ.20ರಷ್ಟು ಖಿನ್ನತೆ ಹಾಗೂ ಶೇ.50ರಷ್ಟು ಕೀಲು, ಬೆನ್ನು ಇಲ್ಲವೆ ಕೈ ಕಾಲು ನೋವಿನಿಂದ ಬಳಲುವವರೆ ಆಗಿದ್ದಾರೆ. ಆದರೂ ಯಾರಿಗೂ ಆರೋಗ್ಯದ ಬಗ್ಗೆ ಕಾಳಜಿ, ಅರಿವು ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಬಿಟ್ಟು ಬೇರೆ ಯಾವ ಪುಸ್ತಕಗಳನ್ನು ಓದುವುದಿಲ್ಲ ಹಾಗೂ ತಾವು ಓದುತ್ತಿರುವ ಪಠ್ಯವಿಷಯಗಳ ಕುರಿತು ಬರೆಯುವುದಕ್ಕೂ ಬರುವುದಿಲ್ಲ. ವೈದ್ಯರಿಗೆ ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸುವಂತಹ ವ್ಯವಧಾನ ಹಾಗೂ ಇಚ್ಚೆಯು ಇರುವುದಿಲ್ಲವೆಂದು ಅವರು ತಿಳಿಸಿದರು.

ಇನ್ನು ಹಿರಿಯ ಸಾಹಿತಿಗಳು ಹಾಗೂ ವಿಮರ್ಶಕರು ವೈದ್ಯ ಹಾಗೂ ವಿಜ್ಞಾನ ಬರವಣಿಗೆಯನ್ನು ಸಾಹಿತ್ಯ ಪ್ರಕಾರವೆಂದು ಪರಿಗಣಿಸುವುದೆ ಇಲ್ಲ. ಹೀಗಾಗಿ ವೈದ್ಯಕೀಯ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಕಷ್ಟಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಬದಲಾಗುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಸಿ.ಆರ್.ಚಂದ್ರಶೇಖರ್‌ರವರ ‘ಮಹಿಳೆಯ ಮನೋಲೋಕ’ ಹಾಗೂ ‘ಒತ್ತಡವೂ ನಿಮ್ಮದೆ ಪರಿಹಾರವೂ ನಿಮ್ಮದೆ’, ಡಾ. ವಸುಂಧರಾ ಭೂಪತಿರವರ ‘ಆರೋಗ್ಯ-ಅನಾರೋಗ್ಯದ ನಡುವೆ’ ಹಾಗೂ ‘ಮಕ್ಕಳ ಆರೈಕೆ-ಅನುಬಂಧ’, ಡಾ. ಎಚ್.ಎಸ್.ಪ್ರೇಮಾರವರ ‘ಆಹಾರ-ಒಂದು ಸಂಸ್ಕೃತಿ’, ಡಾ.ಎನ್.ಗೋಪಾಲಕೃಷ್ಣರವರ ‘ಆರೋಗ್ಯ ಮಂದಾರ’ ಹಾಗೂ ಡಾ.ಬಿ.ಎನ್.ಹೇಮಾದೇವಿರವರ ‘ಕ್ಯಾನ್ಸರ್ ಗೆಲ್ಲುವ ಹಾದಿಯಲ್ಲಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಹಿರಿಯ ವಿಮರ್ಶಕಿ ಎಂ.ಎಸ್.ಆಶಾದೇವಿ ಉಪಸ್ಥಿತರಿದ್ದರು.

ಸಮಾಜದ ವಿವಿಧ ಜ್ಞಾನಶಿಸ್ತುಗಳು ಒಂದಾಗುವ ಮೂಲಕ ಜನಸಾಮಾನ್ಯರಲ್ಲಿ ಅರಿವನ್ನು ಹೆಚ್ಚಿಸಬೇಕಿದೆ. ವೈದ್ಯರು, ವಿಜ್ಞಾನಿಗಳು ಲೇಖಕರಾಗಿ ಗುರುತಿಸಿಕೊಳ್ಳಬೇಕು. ಸಾಹಿತ್ಯ-ಸಮ್ಮೇಳನಗಳಲ್ಲಿ ಜನಸಾಮಾನ್ಯರೊಂದಿಗೆ-ಸಾಹಿತಿಗಳೊಂದಿಗೆ ಬೆರೆಯುವ ಮೂಲಕ ಜ್ಞಾನ, ತಿಳುವಳಿಕೆಯನ್ನು ಪರಿಸ್ಪರ ವಿನಿಮಯ ಮಾಡಿಕೊಳ್ಳಬೇಕಿದೆ. ಇಂತಹ ಸಕರಾತ್ಮಕ ಧೋರಣೆಗಳಿಂದ ಮಾತ್ರ ಬಂಡವಾಳಶಾಹಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ.

ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ವಿಮರ್ಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News