ಪ್ರತಿ ಕ್ಲೀನಿಕ್‌ನಲ್ಲೂ ಗ್ರಂಥಾಲಯವಿರಲಿ: ಡಾ.ವಸುಂಧರಾ ಭೂಪತಿ

Update: 2018-09-23 12:22 GMT

ಬೆಂಗಳೂರು, ಸೆ.23: ರಾಜ್ಯದಲ್ಲಿರುವ ಪ್ರತಿ ಕ್ಲೀನಿಕ್‌ನಲ್ಲಿ ಸಣ್ಣಮಟ್ಟದ ಗ್ರಂಥಾಲಯ ಇರಬೇಕು. ಆ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳನ್ನು ಕ್ಲೀನಿಕ್‌ಗಳಿಗೆ ತಲುಪಿಸುವಂತಹ ಅಭಿಯಾನವನ್ನು ಆರಂಭಿಸುವ ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಸುಂಧರಾ ಭೂಪತಿ ತಿಳಿಸಿದರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ಜನರ ಜೀವನ ಮಟ್ಟ ಉತ್ತಮ ಪಡಿಸುವಲ್ಲಿ ಆರೋಗ್ಯ ಶಿಕ್ಷಣ ತೀರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕುರಿತ ಕೃತಿಗಳು ಬಿಡುಗಡೆ ಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇವತ್ತು ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿರುವುದರಿಂದ ಯಾವ ವೈದ್ಯರು ರೋಗಿಗಳ ನಾಡಿಮಿಡಿತವನ್ನು ನೋಡಿ ಪರೀಕ್ಷಿಸುವುದಿಲ್ಲ. ಸಣ್ಣ ಮಟ್ಟದ ರೋಗಗಳಿಗೂ ದೊಡ್ಡಮಟ್ಟದ ಪರೀಕ್ಷೆಗೆ ಸೂಚಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಜನತೆ ಆರೋಗ್ಯದ ಕುರಿತು ಪ್ರಾಥಮಿಕ ಮಾಹಿತಿ ತಿಳಿದುಕೊಂಡರೆ, ರೋಗ ಬರದಂತೆ ತಡೆಗಟ್ಟಬಹುದು ಎಂದು ಅವರು ಹೇಳಿದರು.

ಆಹಾರ ತಜ್ಞೆ ಎಚ್.ಎಸ್.ಪ್ರೇಮಾ ಮಾತನಾಡಿ, ನಾವು ತಿನ್ನುವ ಆಹಾರ ಎನ್ನುವುದು ಕೇವಲ ಊಟ, ತಿಂಡಿ ಮಾತ್ರವಲ್ಲ. ಅದು ನಮ್ಮ ಸಂಸ್ಕೃತಿ ಭಾಗವಾಗಿದೆ. ನಾವು ಸೇವಿಸುವ ಆಹಾರದಲ್ಲಿ ನಮ್ಮ ಪರಂಪರೆ, ಪ್ರೀತಿ, ರೈತರ ಬದುಕು, ಮಾರುಕಟ್ಟೆಯ ಲಾಭಿ ಎಲ್ಲವೂ ಸೇರಿದೆ ಎಂದು ತಿಳಿಸಿದರು.

ಇವತ್ತು ವಿದೇಶಿ ಕಂಪೆನಿಗಳು ದೇಶದ ಆಹಾರ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದ್ದು, ಪರಂಪರಾಗತ ಆಹಾರ ವಿಧಾನವನ್ನು ಮೂಲೆಗುಂಪು ಮಾಡುವ ಮಟ್ಟಕ್ಕೆ ಹಿಡಿತ ಸಾಧಿಸಿವೆ. ಇದು ಹೀಗೆಯ ಮುಂದುವರೆದರೆ ದೇಶದ ಜನತೆ ಆಹಾರ ಕ್ರಮದಲ್ಲೂ ಪರಾವಲಂಭನೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News