ಹನಿಗವಿ ಅಗ್ರಸ್ಥಾನದಲ್ಲಿ ‘ಜರಗನಹಳ್ಳಿ’: ಪ್ರೊ.ಚಂಪಾ

Update: 2018-09-23 12:50 GMT

ಬೆಂಗಳೂರು, ಸೆ.23: ಎಷ್ಟೋ ಜನ ಹನಿಗವಿತೆ ಬರೆದರೂ ಸಹ, ಅವರಲ್ಲಿ ಜರಗನಹಳ್ಳಿ ಶಿವಶಂಕರ್ ಅಗ್ರಸ್ಥಾನದಲ್ಲಿ ನಿಲ್ಲುವರು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ವಿಕಾಸ ರಂಗವತಿಯಿಂದ ಕವಿ ಜರಗನಹಳ್ಳಿ ಶಿವಶಂಕರ್ ಅವರ 70ನೆ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ‘ಸಾಹಿತ್ಯ ಸಹವಾಸ’ ಹಾಗೂ ನದಿ ಕವನ ಸಂಕಲನ, ಪನ್ನೀರು ಹನಿಗವಿತೆಗಳು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಶಂಕರ್ ಅವರ ಹನಿ ಕವನ ನೇರ ನುಡಿ ಮತ್ತು ವ್ಯಕ್ತಿತ್ವ ಹೊಂದಿರುವ ಕಾರಣದಿಂದಲೇ ಅವರು, ಅಗ್ರಸ್ಥಾನ ತಲುಪಿದ್ದಾರೆ. ಅದಲ್ಲದೆ, ಜಗತ್ತಿನಲ್ಲಿರುವ ವಾಸವ್ಯವನ್ನು ಬರವಣಿಗೆ ಮೂಲಕ ನೀಡುವುದು ಬರಹಗಾರನ ಕೆಲಸವಾಗಿದೆ ಎಂದರು.

ಪ್ರತಿಯೊಬ್ಬ ಸಾಹಿತಿಗೂ ಸಾಮಾಜಿಕ ಬದ್ಧತೆ ಇರಲೇಬೇಕು. ಎಲ್ಲವೂ ಸಮಾಜಕ್ಕಾಗಿಯೇ ಎಂಬ ಸತ್ಯವನ್ನು ಸಾಹಿತಿಗಳೂ ಅರಿಯಬೇಕು. ತಮ್ಮ ಬರಹ ತಮಗೆ ಮಾತ್ರ ಎಂಬ ಹಲವು ಸಾಹಿತಿಗಳ ಧೋರಣೆ ಸರಿಯಲ್ಲ. ಹನಿಗವಿತೆಗಳ ಬಗ್ಗೆ ಸರಿಯಾದ ಅಭಿಪ್ರಾಯ ಕನ್ನಡದಲ್ಲಿ ಮೂಡದ ಕಾರಣ ಹನಿಗವಿತೆ ಗಂಭೀರ ಪ್ರಕಾರವಲ್ಲ ಎಂದು ಹಲವರು ಅದರಿಂದ ವಿಮುಖರಾದರು. ಹನಿಗವಿತೆಗಳ ಶಕ್ತಿಯನ್ನು ಅರಿತು ಅದರ ಪ್ರಚಾರ ಹೆಚ್ಚಾಗುವ ಕಾರ್ಯಕ್ರಮಗಳು ಆಗಬೇಕು ಎಂದು ಚಂಪಾ ಸಲಹೆ ಮಾಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ನಮ್ಮ ನಡುವೆ ವೈಜ್ಞಾನಿಕ ಹನಿಗವಿ ಎಂದರೆ, ಅದು ಜರಗನಹಳ್ಳಿ ಶಿವಶಂಕರ್ ಮಾತ್ರ. ಅವರ ಸಾಹಿತ್ಯದಲ್ಲಿ ಪ್ರಕೃತಿಗೆ ಹೆಚ್ಚಿನ ಸ್ಥಾನ ನೀಡುವ ಜೊತೆಗೆ, ಪ್ರಕೃತಿಯನ್ನು ಪ್ರತಿಯೊಬ್ಬರು ಓದುವಂತೆ ಕೆಲಸ ಮಾಡಿದ್ದಾರೆ ಎಂದು ನುಡಿದರು.

ಜೇಡ ಬಲೆ ಕಟ್ಟಿರುವ ಮಾದರಿಯಲ್ಲಿಯೇ ಜರಗನಹಳ್ಳಿ ಅವರ ಕವನವೂ ಇರುತ್ತದೆ. ಕೆಲವೇ ಅಕ್ಷರಗಳಲ್ಲಿ ಹಲವು ಅರ್ಥಗಳನ್ನು ನೀಡುವ ಕವನ ಅವರದಾಗಿದೆ ಎಂದ ಅವರು, ಹನಿಗವಿತೆಯಲ್ಲಿ 16 ಪ್ರಕಾರಗಳಿದ್ದು, ಒಂದೊಂದು ಪ್ರಕಾರವೂ ಸಹ ಅನುಭವ ಮತ್ತು ವಿಚಾರ ಸಮೀಕರಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ, ನಿತಿನ್ ಷಾ, ಎನ್. ರಾಮನಾಥ್, ಸಂಘದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ, ಸಂಚಾಲಕರಾದ ಡಾ.ಸಂತೋಷ್ ಹಾನಗಲ್, ಕೆ.ಎಸ್.ಎಂ.ಹುಸೇನ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News