ಕೇವಲ ಬರವಣಿಗೆ, ಭಾಷಣದಿಂದ ಸಮಾಜ ತಿದ್ದಲು ಅಸಾಧ್ಯ: ಪ್ರೊ.ಚಂದ್ರಶೇಖರ್ ಪಾಟೀಲ್

Update: 2018-09-23 13:11 GMT

ಬೆಂಗಳೂರು, ಸೆ. 23: ಅಕ್ಷರಗಳ ಮೂಲಕ ಯುದ್ಧ ಗೆಲ್ಲುವವರಂತೆ ಹೊರಟಿದ್ದೇವೆ. ಕೇವಲ ಬರವಣಿಗೆ, ಭಾಷಣದಿಂದ ಸಮಾಜ ತಿದ್ದಲು ಸಾಧ್ಯವಿಲ್ಲ. ಸಮಾಜಮುಖಿ ಆಂದೋಲನ ಬಹಳ ಮುಖ್ಯ ಎಂದು ಹಿರಿಯ ಸಾಹಿತಿ ಚದ್ರಶೇಖರ ಪಾಟೀಲ್ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಡಾ.ಹೆಬ್ಬಾಲೆ ಕೆ.ನಾಗೇಶ್ ಅವರ ’ಅಗ್ರಹಾರ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜವನ್ನು ಬರವಣಿಗೆ ಮೂಲಕ ಅಥವಾ ಭಾಷಣ ಮಾಡುವುದರಿಂದ ಸಂಪೂರ್ಣ ಬದಲಾವಣೆ ಮಾಡುತ್ತೇವೆ ಎಂದುಕೊಳ್ಳುವುದು ಸರಿಯಾದುದಲ್ಲ. ಅದಕ್ಕೆ ಕ್ರಿಯಾತ್ಮಕ ಆಂದೋಲನ ರೂಪಗೊಳ್ಳಬೇಕು ಎಂದು ಹೇಳಿದರು.

ಇತ್ತೀಚಿಗೆ ನಾವು ವಿಷಮ ಸಮಾಜದಲ್ಲಿ ಬದುಕುತ್ತಿದ್ದು, ಹಲವು ವಿಚಾರಗಳ ಗೊಂದಲಮಯಗೊಂಡಿದೆ. ಅಕ್ಷಾಂಶ, ರೇಖಾಂಶಗಳ ರೀತಿ ಸಮಾಜದಲ್ಲೂ ಗೆರೆ ಹಾಕಿಕೊಂಡಿದ್ದೇವೆ. ಇಂತಹ ವಿಷಮತೆ ತೊಲಗಿಸಬೇಕಾದರೆ ಆಂದೋಲನ ಅಗತ್ಯವಿದೆ ಎಂದು ಅವರು ತಿಳಿಸಿದರು.

ಪುಸ್ತಕದ ಓದಿನಲ್ಲಿ ಎಲ್ಲ ಓದುಗರಿಗೆ, ವಿಮರ್ಶಕರಿಗೆ ವಿವಿಧ ರೀತಿಯ ಅನುಭವಗಳಾಗಿರಬಹುದು. ಕೆಲವರಿಗೆ ಕಠಿಣ ಶಬ್ದಗಳು ಅರ್ಥವಾಗದಿರಬಹುದು, ತಾಳ್ಮೆಯಿಂದ ಓದಿದರೆ ಎಲ್ಲವೂ ಅರ್ಥವಾಗುತ್ತದೆ. ಲೇಖಕರೂ ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳ ಶಬ್ದಗಳನ್ನು ಬಳಸಬೇಕು ಎಂದು ನುಡಿದರು.

ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಇಂದಿಗೂ ನಮ್ಮ ಸಮಾಜದಲ್ಲಿ ಜಾತಿಗಾಗಿ ಜೀವವನ್ನೆ ತೆಗೆಯುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿಯು ಕೆಳಜಾತಿಯವರು ಮೇಲ್ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ ಅವರ ಜೀವವನ್ನು ಕೊಲ್ಲುವ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಮುಂದೊಂದು ದಿನ ದೇಶ ವಿನಾಶದತ್ತ ಸಾಗುತ್ತದೆ ಎಂದು ಎಚ್ಚರಿಸಿದರು.

ಹೆಬ್ಬಾಲೆ ನಾಗೇಶ್ ಅವರು ತಮ್ಮ ಕಾದಂಬರಿಯಲ್ಲಿ ದಲಿತರ ನೋವನ್ನು ಅಭಿವ್ಯಕ್ತಿಸಿದ್ದಾರೆ. ಶೋಷಿತ ಸಮುದಾಯವನ್ನು ಗುರುತಿಸಿ, ಅವರ ನೋವು ನಲಿವನ್ನು ಚಿತ್ರಿಸಿದ್ದಾರೆ. ಹೆಣ್ಣುಮಕ್ಕಳು ದೇವಸ್ಥಾನದಲ್ಲಿ ಪೂಜೆಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಗ್ರಂಥಾಲಯದಲ್ಲಿ ಓದಿದರೆ ಸಮಾಜ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಬಿಂಬಿಸಿದ್ದಾರೆ ಎಂದರು.

ಸ್ತ್ರೀವಾದಿ ಚಿಂತಕಿ ಡಾ.ಎನ್. ಗಾಯತ್ರಿ ಮಾತನಾಡಿ, ಈ ಕಾದಂಬರಿ ಹಲವಾರು ಅಗ್ರಹಾರ ಕಥೆ ಹೇಳುವ ಕನ್ನಡ ಪರಂಪರೆಯಲ್ಲಿ ಇದು ವಿಶಿಷ್ಟ. ವಾಸ್ತವ ಪರಂಪರೆಗಿಂತ ಭಿನ್ನವಾದದ್ದು. ಪಾರಂಪರಿಕ ತಂತ್ರಜ್ಞಾನ ಮೀರಿ ಹಲವಾರು ಕೌಶಲ್ಯವನ್ನು ಸಾರಿದೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸಾಂಕೇತಿಕ ಅರ್ಥದಲ್ಲಿ ತತ್ವವನ್ನು ವಿವರಿಸುತ್ತ ಹೋಗುತ್ತದೆ. ಪತ್ರಗಳ ಭಾಷೆಯ ಮೂಲಕ ಹಳ್ಳಿಯ ವೈಚಾರಿಕತೆಯನ್ನು ಮೂಡಿಸಿದ್ದಾರೆ. ಕೆಳಮಟ್ಟದವರು ಶಿಕ್ಷಣದಿಂದ ವಂಚಿತರಾಗಿರುವುದನ್ನು ಹಾಗೂ ಅವರಿಗೆ ಶಿಕ್ಷಣ ಬೇಕು ಎನ್ನುವುದನ್ನು ಹೇಳುತ್ತದೆ. ಕಲಿಕೆಯ ಓದು ಎನ್ನುವುದು ಕೇವಲ ಮೇಲ್ಜಾತಿಯವರ ಸೊತ್ತಲ್ಲ ಎಂಬುದನ್ನು ಹೆಬ್ಬಾಲೆ ಕೆ ನಾಗೇಶ್ ಅವರು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಡಾ. ಹೆಬ್ಬಾಲೆ ಕೆ ನಾಗೇಶ್, ಡಾ.ಡಿ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News