ಬಿಜೆಪಿ ಹಗರಣಗಳ ವಿರುದ್ಧ ಕಾಂಗ್ರೆಸ್ ಹೋರಾಟ: ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್

Update: 2018-09-23 14:55 GMT

ಬೆಂಗಳೂರು, ಸೆ.23: ರಾಜ್ಯದಿಂದ ಲೋಕಸಭಾ ಚುನಾವಣೆಗೆ ಅಧಿಕ ಸ್ಥಾನ ಗೆದ್ದುಕೊಡುವ ಜವಾಬ್ದಾರಿ ನಮ್ಮ ಮೇಲಿದ್ದು, ಹಲವು ಹಗರಣಗಳ ಆರೋಪಗಳು ಬಿಜೆಪಿ ಮೇಲಿವೆ. ಇವೆಲ್ಲದರ ವಿರುದ್ಧ ನಾವು ಹೋರಾಟ ಮಾಡಿ ಪಕ್ಷ ಸಂಘಟಿಸಬೇಕಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. 

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಹಾಗೂ ವಿಭಾಗ ಮಟ್ಟದ ಅಧ್ಯಕ್ಷರುಗಳ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೆ ತಯಾರಿ ಮಾಡೋದರ ಬಗ್ಗೆ ಚರ್ಚೆಯಾಗಿದೆ. ಮನೆ ಮನೆಗೆ ತೆರಳಿ ಪಕ್ಷ ಸಂಘಟನೆ ಮಾಡಲು ಹಣ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಬೂತ್‌ಮಟ್ಟದ ಪ್ರಮುಖರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳನ್ನೂ ಮಾಡಲಾಗುತ್ತಿದ್ದು, ಪ್ರತಿ ಕಮಿಟಿಯೂ 10 ಸಾವಿರ ರೂ.ಗಳನ್ನು ಸಂಗ್ರಹಿಸಬೇಕು. ಈ ಹಣವು ಎಐಸಿಸಿ ಮಟ್ಟದಿಂದ ಡಿಸಿಸಿವರೆಗೂ ಹಂಚಿಕೆ ಆಗಲಿದೆ. ಅಲ್ಲದೆ, ಸದಸ್ಯತ್ವದ ನೋಂದಣಿ, ವಂತಿಗೆ ಸಂಗ್ರಹದ ಸಂಪೂರ್ಣ ಮಾಹಿತಿಯನ್ನು ನಾವು ಇಟ್ಟುಕೊಳ್ಳುತ್ತೇವೆ ಎಂದು ತಿಳಿಸಿದರು.

ರಫೆಲ್ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಭಾಗಿಯಾಗಿದ್ದಾರೆ. ಹೀಗಾಗಿ, ಅವರು ಈ ವಿಚಾರದಲ್ಲಿ ಯಾವುದೆ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ಯುಪಿಎ ಅವಧಿಯ ಪ್ರತಿ ಆರೋಪಗಳಿಗೂ ತನಿಖೆಗೆ ಆಗ್ರಹಿಸುತ್ತಿತ್ತು. ಈಗ ಏಕೆ ಬಿಜೆಪಿ ಮೌನ ವಹಿಸಿದೆ ಎಂದು ಅವರು ಪ್ರಶ್ನಿಸಿದರು. ಪೆಟ್ರೋಲ್ ಮೇಲಿನ ರಾಜ್ಯ ಸುಂಕ ಕಡಿತಗೊಳಿಸಿದ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ. ರಾಜ್ಯಗಳ ಮೇಲೆ ಬೆರಳು ತೋರಿಸೋ ಕೇಂದ್ರ ಸರಕಾರ ಏನು ಮಾಡಿದೆ ಎಂದ ಅವರು, ಮೋದಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಅನರ್ಹರಾಗಿದ್ದು, ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುವವರೆ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಅವರು ಕುದುರೆ ವ್ಯಾಪಾರ ಮಾಡಲು ಮುಂದಾಗಿದ್ದು, ಇವರಿಗೆಲ್ಲ ಎಲ್ಲಿಂದ ಹಣ ಬಂತು ಎಂದು ಪ್ರಶ್ನಿಸಿದ ಅವರು, ನಮ್ಮ ಪಕ್ಷದಲ್ಲಿಯೇ ಪಕ್ಷದ ವಿರುದ್ಧವಾಗಿ ನಡೆದುಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಅ.2ರಿಂದ ನ.19ರ ವರೆಗೆ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸಲಿದ್ದು, ಈ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ನೀಡಿರುವ ಸುಳ್ಳು ಭರವಸೆಗಳ ಬಗ್ಗೆ ಜನರ ಬಳಿ ತೆರಳಿ ತಿಳಿಸಲಾಗುವುದು ಎಂದು ಹೇಳಿದರು. ಮೋದಿ ನೇತೃತ್ವದ ಸರಕಾರ ಸ್ವಚ್ಛ ಭಾರತ್, ಭೇಟಿ ಬಚಾವೋ ಭೇಟಿ ಪಡಾವೋ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ, ಈ ಯಾವ ಕಾರ್ಯಕ್ರಮಗಳೂ ಜನರಿಗೆ ತಲುಪಿಲ್ಲ. ಹೀಗಾಗಿ, ಮೋದಿ ಸರಕಾರವನ್ನು ವಿರೋಧಿಸಿ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News