ಶಾಂತಿ ಕದಡುವ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು: ಶಾಸಕ ರೋಷನ್‌ಬೇಗ್

Update: 2018-09-23 14:59 GMT

ಬೆಂಗಳೂರು, ಸೆ.23 : ದೇಶದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯ ಒಬ್ಬರಿಗೊಬ್ಬರು ಪೂರಕವಾಗಿ, ಅನ್ಯೋನ್ಯವಾಗಿದ್ದೇವೆ. ಕೋಮುವಾದದಂತಹ ಯಾವುದೇ ಶಾಂತಿ ಕದಡುವ ಚಟುವಟಿಕೆಗಳಿಗೆ ನಾವು ಆಸ್ಪದ ನೀಡಬಾರದು ಎಂದು ಶಾಸಕ ಆರ್.ರೋಷನ್ ಬೇಗ್ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಹಡ್ಸನ್ ಸ್ಮಾರಕ ದೇವಾಲಯದ 114ನೇ ವಾರ್ಷಿಕೋತ್ಸವ ವಿಶೇಷ ಆರಾಧನೆಗಳ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಲವು ಧರ್ಮ, ಜಾತಿಗಳನ್ನು ಒಳಗೊಂಡಿದ್ದು, ಬಹುತ್ವವನ್ನು ಸಾರಿ ಹೇಳುತ್ತಿದೆ. ಹೀಗಾಗಿ, ದೇಶದಲ್ಲಿ ನಾವು ಒಗ್ಗಟ್ಟಾಗಿರುವ ಮೂಲಕ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡೋಣ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಹಡ್ಸನ್ ಚರ್ಚ್‌ಗೆ ಒಂದು ಐತಿಹಾಸಿಕ ಮಹತ್ವ ಮತ್ತು ಹಿನ್ನೆಲೆಯಿದೆ. ಇದರ ನಿರ್ಮಾಪಕರು ಕೂಡ ಅಷ್ಟೇ ಮಹತ್ವವುಳ್ಳ ವ್ಯಕ್ತಿ. ಕನ್ನಡದ ನಾಡು, ನುಡಿಗೆ ಸೇವೆ ಸಲ್ಲಿಸಿದ ಕ್ರೈಸ್ತ ಮಿಷನರಿ ಹಡ್ಸನ್ ಜೋಶ್ವಾ ಅವರ ಪುತ್ಥಳಿಯನ್ನು ನಗರದ ಹಡ್ಸನ್ ಚರ್ಚ್ ಆವರಣದಲ್ಲಿ ನಿರ್ಮಿಸಲು ಅಗತ್ಯ ನೆರವು ನೀಡುವ ಸಂಬಂಧ ಸರಕಾರದೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಶಾಸಕ ರೋಷನ್‌ ಬೇಗ್ ಭರವಸೆ ನೀಡಿದರು.

ಹಡ್ಸನ್ ಸ್ಮಾರಕ ದೇವಾಲಯದ ಮುಖಂಡರಾದ ರೆವರೆಂಡ್ ಡಾ. ಸಾಲೊಮನ್ ಥಾಮಸ್ ಮಾತನಾಡಿ, ಕರ್ನಾಟಕದಲ್ಲಿ ಹಡ್ಸನ್ ದೇವಾಲಯ ಅನೇಕ ಚರ್ಚ್‌ಗಳನ್ನು ನಿರ್ಮಿಸಿದೆ. ಅವುಗಳ ಸೇವೆಯಲ್ಲೂ ತೊಡಗಿಸಿಕೊಂಡಿದೆ. ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು, ನಿಮ್ಮ ವೈರಿಗಳನ್ನು ಪ್ರೀತಿ ಮಾಡಿರಿ, ವೈರಿಗಳು ಹಸಿದಿದ್ದರೆ ಅವರಿಗೆ ಊಟಕ್ಕೆ ಕೊಡಿ, ಒಂದು ಕೆನ್ನೆಗೆ ಯಾರಾದರು ಹೊಡೆದರೆ, ಮತ್ತೊಂದು ಕೆನ್ನೆಯನ್ನು ತೋರಿಸಿ, ಒಬ್ಬರ ಸಂಗಡ ಒಬ್ಬರು ಸಮಾಧಾನದಿಂದ ಇರಿ, ಲೋಕಕ್ಕೆ ಬರುವಾಗ ನಾವು ಏನನ್ನೂ ತರುವುದಿಲ್ಲ, ಹಾಗೆಯೇ ಹೋಗುವಾಗಲೂ ನಾವು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ 70 ವರ್ಷ ದಾಟಿದ 29 ಜನರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಚರ್ಚ್‌ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೊಡಗಿನ ಪ್ರವಾಹ ಪೀಡಿತ ಪ್ರದೇಶವನ್ನು ಏಕಾಂಗಿಯಾಗಿ ಹೋಗಿ ಸರ್ವೆ ಮಾಡಿ ಸಮಾಜ ಸೇವೆ ಮಾಡಿದ ಜೊನಾಥನ್ ಅರೊಣ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಚರ್ಚ್ ವತಿಯಿಂದ ಕೊಡಗಿನಲ್ಲಿ ಮನೆ ಕಳೆದುಕೊಂಡ ಒಬ್ಬರಿಗೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಯಿತು.

ವಾರ್ಷಿಕೋತ್ಸವ ಅಂಗವಾಗಿ ಸೆ.1ರಿಂದ ಹಮ್ಮಿಕೊಂಡಿದ್ದ ನಾನಾ ಸ್ಪರ್ಧಿಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೈಸೂರಿನ ಜೆ.ಬಿ. ಮ್ಯೂಸಿಕಲ್ ಗ್ರೂಪ್ ವತಿಯಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಚರ್ಚ್‌ನ ಪಾಲ್ ದಿನಕರನ್, ಯೆಹೆಜ್ಕೇಲಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News