ಅತೃಪ್ತ ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ಮುಖಂಡರ ದೌಡು

Update: 2018-09-23 15:21 GMT

ಬೆಂಗಳೂರು, ಸೆ. 23: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನಗೊಂಡು ನಿನ್ನೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದ ಕಾಂಗ್ರೆಸಿನ ಮೂವರು ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್ ನಿವಾಸಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್, ಎಂ.ಟಿ.ಬಿ.ನಾಗರಾಜ್ ನಿವಾಸಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಈ ಮಧ್ಯೆ ಸುಧಾಕರ್ ಅವರನ್ನು ತನ್ನ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ, ‘ಏನಯ್ಯ ನಿನ್ನ ಕತೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಿನು ಎಲ್ಲಿಗೆ ಹೋಗಿದ್ದೇ ಎಲ್ಲ ನನಗೆ ಚೆನ್ನಾಗಿ ಗೊತ್ತು, ನನಗೆ ಏನೂ ಗೊತ್ತಿಲ್ಲ ಅಂತ ತಿಳಿಯಬೇಡ. ಈ ರೀತಿ ಮುಂದೆ ಆಗಬಾರದು. ನಿಮ್ಮಿಂದ ನನಗೆ ಕೆಟ್ಟ ಹೆಸರು ಬರುತ್ತಿದೆ. ಏನೇ ಸಮಸ್ಯೆ ಇದ್ದರೂ ನನ್ನೊಂದಿಗೆ ಚರ್ಚೆ ಮಾಡು ಎಂದು ಸಿದ್ದರಾಮಯ್ಯ, ಶಾಸಕ ಸುಧಾಕರ್‌ಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಮಂತ್ರಿ ಸ್ಥಾನ ಕೇಳಿಲ್ಲ: ನಾನು ಪ್ರತಿನಿತ್ಯ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿರುತ್ತೇನೆ. ನಿರಂತರವಾಗಿ ಅವರ ಸಂಪರ್ಕದಲ್ಲಿದ್ದೇನೆ. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಕ್ಷೇತ್ರ, ಜಿಲ್ಲೆಯ ಕೆಲವು ವಿಚಾರ ನೋವು ತಂದಿದೆ. ಇದನ್ನ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ಸಾಮರ್ಥ್ಯ ನೋಡಿ ಸಚಿವ ಸ್ಥಾನ ನೀಡಲಿ. ಇದೇನು ಭಿಕ್ಷೆ ಬೇಡುವುದಲ್ಲ, ನನ್ನ ಸಾಮರ್ಥ್ಯವನ್ನೂ ನಾಯಕರು ಗುರುತಿಸಬೇಕಲ್ವಾ? ನಮ್ಮ ಸಾಮರ್ಥ್ಯ ನೋಡಿ ಸಂಪುಟ ವಿಸ್ತರಣೆಯ ವೇಳೆ ಸಲಹೆ ನೀಡಲಿದ್ದಾರೆ ಎಂಬ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಲ್ಲಿನ ವೈಟ್‌ಫೀಲ್ಡ್‌ನ ಗರುಡಾಚಾರ್ ಪಾಳ್ಯದಲ್ಲಿರುವ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಟಿ.ಬಿ.ನಾಗರಾಜ್ ಅವರ ನಿವಾಸಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

‘ನಾನು ಇಲ್ಲಿಗೆ ಸಚಿವ ಸ್ಥಾನ ಕೇಳುವುದಕ್ಕೆ ಬಂದಿಲ್ಲ. ಬದಲಾಗಿ ಸಣ್ಣ-ಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬಂದಿದ್ದೆ. ಆ ಸಣ್ಣ-ಪುಟ್ಟ ಸಮಸ್ಯೆಗಳು ಬಗೆಹರಿಸುವ ಭರವಸೆ ಸಿಕ್ಕಿದೆ. ಸಿದ್ದರಾಮಯ್ಯನವರು ನಮಗೆ ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ಅವರು ಹಾಗೂ ನನ್ನ ನಡುವೆ ಯಾವುದೇ ಮನಸ್ತಾಪ ಇಲ್ಲ. ನಾಳೆ ಸಿದ್ದರಾಮಯ್ಯರನ್ನು ಭೇಟಿ ಮಾಡುತ್ತೇನೆ’

-ಎಂಟಿಬಿ ನಾಗರಾಜ್, ಹೊಸಕೋಟೆ ಕ್ಷೇತ್ರದ ಶಾಸಕ

ಶಾಸಕ ಡಾ.ಸುಧಾಕರ್ ನನ್ನ ಸ್ನೇಹಿತರು, ತಿಂಡಿ ತಿನ್ನಲು ಆಹ್ವಾನಿಸಿದ್ದು, ಹೀಗಾಗಿ ಇಲ್ಲಿಗೆ ಬಂದಿದ್ದೇನೆ. ಅವರು ಊಟಕ್ಕೆ ಕರೆದರೆ ಊಟಕ್ಕೂ ಬರುತ್ತೇನೆ. ಸುಧಾಕರ್ ನಿನ್ನೆ ಚೆನ್ನೈ ಬಳಿ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ’

-ಝಮೀರ್ ಅಹ್ಮದ್‌ಖಾನ್, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News