"ಜನಸಂಖ್ಯೆ ಪ್ರಮಾಣ ಆಧರಿಸಿ ಬಿಬಿಎಂಪಿ ವಿಭಜನೆಗೆ ಶಿಫಾರಸ್ಸು"

Update: 2018-09-23 15:50 GMT

ಬೆಂಗಳೂರು, ಸೆ.23: ಬಿಬಿಎಂಪಿಯಲ್ಲಿ ಐದು ಮೇಯರ್‌ಗಳು ಒಬ್ಬ ಮುಖ್ಯ ಮೇಯರ್ ಅಡಿ ಕಾರ್ಯ ನಿರ್ವಹಿಸುವುದರಿಂದ ನಗರದ ಏಕತೆಗೆ ಆಡಚಣೆ ಆಗುವುದಿಲ್ಲ ಎಂದು ಬೆಂಗಳೂರು ಆಡಳಿತ ಪುನರ್ ರಚನೆ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ತಿಳಿಸಿದರು.

ರವಿವಾರ ನಗರದಲ್ಲಿ ಸಿಪಿಐಎಂ ಪಕ್ಷದಿಂದ ಏರ್ಪಡಿಸಿ ಆಡಳಿತ ನಿರ್ವಹಣೆ ಮಸೂದೆ ಸಂಬಂಧದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ, ಕೇಂದ್ರ ಬಿಬಿಎಂಪಿ ಸೇರಿದಂತೆ ಐದು ಬಿಬಿಎಂಪಿ ಆಡಳಿತ ವಿಭಾಗಗಳನ್ನು ಶಿಫಾರಸ್ಸು ಮಾಡಲಾಗಿದೆ. ಹಾಗೂ ಮುಂದಿನ 20 ವರ್ಷಗಳಲ್ಲಿ ಹೆಚ್ಚಳ ವಾಗಬಹುದಾದ ಜನಸಂಖ್ಯೆ ಪ್ರಮಾಣ ಆಧರಿಸಿ ಬಿಬಿಎಂಪಿ ವಿಭಜನೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯಿಂದ ಬೆಂಗಳೂರು ಬದಲಾಗಲು ಸಾಧ್ಯವಿಲ್ಲ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಷಯಗಳನ್ನು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಸಿದ್ಧಪಡಿಸಿರುವ ಆಡಳಿತ ನಿರ್ವಹಣೆ ಮಸೂದೆಯನ್ನು ಅಂಗೀಕರಿಸುವಲ್ಲಿ ಸರಕಾರ ಆಸಕ್ತಿ ವಹಿಸಬೇಕು ಎಂದರು.

ಬಿಬಿಎಂಪಿ ವಿಭಜನೆ ಆಗುವುದರಿಂದ ಆಯಾ ಬಿಬಿಎಂಪಿ ವಾರ್ಡ್ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಪರಿಹಾರ ಸುಲಭವಾಗಲಿದೆ. ತೆರಿಗೆ, ಆಡಳಿತವ್ಯವಸ್ಥೆ ಮೂಲಭೂತ ಸೌಲಭ್ಯ ಒದಗಿಸುವುದು. ಘನ ತ್ಯಾಜ್ಯವಿರೇವಾರಿ, ಒಳಚರಂಡಿ, ರಸ್ತೆ ನಿರ್ಮಾಣ ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವಿಭಜನೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು. ಪ್ರಸ್ತುತ ಇರುವ 200 ವಾರ್ಡ್‌ಗಳನ್ನು 400 ವಾರ್ಡ್‌ಗಳಾಗಿ ವಿಂಗಡಿಸಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ವಾರ್ಡ್ ಹೆಚ್ಚಳವಾದರೆ ಜುನಾವಣೆಗೆ ಆಡಚಣೆಯಾಗಲಿದೆ ಎನ್ನುವುದು ತಪ್ಪು ಅಭಿಪ್ರಾಯ. ರಾಜ್ಯ ಜುನಾವಣಾ ಆಯೋಗಕ್ಕೆ ಸರಕಾರ ವಾರ್ಡ್ ವಿಭಜನಾ ಜವಾಬ್ದಾರಿಯನ್ನು ನೀಡಬೇಕು ಎಂದರು.

ವಾರ್ಡ್ ಸಮಿತಿ ರಚನೆಗೂ ಶಿಫಾರಸ್ಸು ಮಾಡಲಾಗಿದ್ದು ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳಿಗೂ ಸಹ ಸಮಿತಿ ಸದಸ್ಯತ್ವವನ್ನು ನೀಡಬೇಕೆಂದು ತಿಳಿಸಿದ ಅವರು ಮಹಾನಗರ ಪಾಲಿಕೆಯಲ್ಲಿ ಸಚಿವ ಸಂಪುಟ ಮಟ್ಟದ ಅವಕಾಶ ನೀಡಬೇಕು ಎಂದರು. ಪ್ರಮುಖವಾಗಿ ಹಾಲಿ ವ್ಯವಸ್ಥೆಯಲ್ಲಿನ ಕೊರತೆ ನಿವಾರಣೆಯಾಗಬೇಕು. ಬೆಂಗಳೂರು ಅತ್ಯುತ್ತಮ ನಗರವಾಗಲು ಮತ್ತು ಜನತೆ ಯೋಗ್ಯವಾಗಿ ಬದುಕಲು ಇರುವ ಅಡಚಣೆ ನಿವಾರಣೆಗಾಗಿ ಬಿಬಿಎಂಪಿ ವಿಭಜನೆ ಆಗತ್ಯವಿದೆ. ಉಳಿದಂತೆ ಪಾರದರ್ಶಕ ಕೊರತೆ ಆರ್ಥಿಕ ನಿರ್ವಹಣೆ ಅವ್ಯವಸ್ಥೆ, ಯೋಜನಾ ಪ್ರದೇಶಕ್ಕೆ ಯೋಜನೆಗಳ ಕೊರತೆ, ನಾಗರಿಕ ಹಿತಾಸಕ್ತಿಗಳನ್ನು ಕಾಪಾಡುವ ಕಾವಲು ವ್ಯವಸ್ಥೆ ವಿಧಾನಗಳು, ವಾರ್ಡ್ ಆಳಿಕೆ ಮತ್ತು ಆಡಳಿತ ಸಬಲೀಕರಣ ಗೊಳಿಸುವುದು. ಸೇವಾ ಸಂಸ್ಥೆಗಳ ವ್ಯಾಪ್ತಿಯನ್ನು ವಾರ್ಡ್‌ಗಳಿಗೆ ಹೊಂದಿಸುವುದು, ವಾರ್ಡ್‌ಗಳಿಗೆ ಹಣಕಾಸು ವರ್ಗಾವಣೆ, ಇನ್ನಿತರ ಅನೇಕ ಸಮಸ್ಯೆಗಳ ಪರಿಹಾರದಿಂದ ಬೆಂಗಳೂರು ಉತ್ತಮಗೊಳಿಸಬಹುದೆಂದು ತಿಳಿಸಿದರು.

ವೇದಿಕೆಯಲ್ಲಿ ಸಿಪಿಎಂ ಕಾರ್ಯದರ್ಶಿ ಉಮೇಶ್, ಅಧ್ಯಕ್ಷ ಪ್ರಕಾಶ್, ಗೋವಿಂದರಾಜು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News