ಕುಸ್ತಿಪಟು ಬಜರಂಗ್ ಪೂನಿಯಾಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಗುರಿ

Update: 2018-09-23 18:54 GMT

ಹೊಸದಿಲ್ಲಿ, ಸೆ.23: ಖೇಲ್ ರತ್ನ ಪ್ರಶಸ್ತಿ ವಂಚಿತ ಹರ್ಯಾಣದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ತಮಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದರು. ಆದರೆ ಅವರು ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಖೇಲ್ ರತ್ನ ಪ್ರಶಸ್ತಿ ಸಿಗದ ಹಿನ್ನೆಲೆಯಲ್ಲಿ ಅವರು ಕ್ರೀಡಾ ಸಚಿವ ರಾಜ್ಯವರ್ಧನ್ ಠಾಥೋಡ್‌ರನ್ನು ಭೇಟಿಯಾಗಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದರು. ಆದರೆ ಸಚಿವರು ಅವರ ಮನವಿಗೆ ಸಕರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿತ್ತು. ಸಚಿವರು ಏನು ಭರವಸೆ ನೀಡಿದರು ಎಂಬ ವಿಚಾರವನ್ನು ಪೂನಿಯಾ ಬಹಿರಂಗಪಡಿಸಲಿಲ್ಲ. ಸಚಿವರನ್ನು ಭೇಟಿಯಾಗುವ ಮೊದಲು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದ ಪೂನಿಯಾ ನಿಲುವು ಬದಲಾಗಿದೆ. ಪೂನಿಯಾ ಪ್ರಶಸ್ತಿಗೆ ಆಯ್ಕೆಯಾಗದಿರುವ ಹಿನ್ನೆಲೆಯಲ್ಲಿ ನೊಂದುಕೊಂಡಿದ್ದರೂ, ಅದಕ್ಕಾಗಿ ಅವರಿಗೆ ಈಗ ಬೇಸರವಿಲ್ಲ. ಮುಂದಿನ ಸ್ಪರ್ಧೆಗಳಿಗೆ ಅವರು ಅಣಿಯಾಗುತ್ತಿದ್ದಾರೆ. ಬುಡಾಪೆಸ್ಟ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಗುರಿಯೊಂದಿಗೆ ಅವರು ತಯಾರಿ ಆರಂಭಿಸಿದ್ದಾರೆ.

 ಪೂನಿಯಾ ಅವರು ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು.‘‘ ನನ್ನ ಕೋಚ್ ಯೋಗೇಶ್ವರ್ ದತ್ ಮತ್ತು ಕುಟುಂಬದ ಸದಸ್ಯರು ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಕಠಿಣ ತಯಾರಿ ನಡೆಸುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ಖೇಲ್ ರತ್ನ ಪ್ರಶಸ್ತಿ ಸಿಗದ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರದಿಂದ ಹಿಂದಕ್ಕೆ ಸರಿದಿರುವುದಾಗಿ ಅರ್ಜುನ್ ಪ್ರಶಸ್ತಿ ಪುರಸ್ಕೃತ ಪೂನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News