ಕರ್ಬಲಾ ಯುದ್ಧದ ಕುರಿತ ಬಂಗಾಳಿ ಮಹಾಕೃತಿ ಈಗ ಇಂಗ್ಲೀಷ್‌ನಲ್ಲಿ

Update: 2018-09-24 11:20 GMT

ಹೊಸದಿಲ್ಲಿ,ಸೆ.23: ಖ್ಯಾತ ಬಾಂಗ್ಲಾದೇಶಿ ಸಾಹಿತಿ ಮಿರ್ ಮುಶರ್ರಫ್ ಹುಸೇನ್ ಅವರು ಕರ್ಬಲಾ ಯುದ್ಧಕ್ಕೆ ಕಾರಣವಾಗಿದ್ದ ಘಟನಾವಳಿ ಗಳನ್ನು ಕೇಂದ್ರವಾಗಿಸಿಕೊಂಡು ರಚಿಸಿರುವ ‘ಬಿಷದ್ ಸಿಂಧು’ ಮಹಾಕೃತಿಯು ಈಗ ಇಂಗ್ಲೀಷ್ ಭಾಷೆಯಲ್ಲಿ ಅನುವಾದಗೊಂಡಿದೆ.

ಹುಸೇನ್ ಕೃತಿಯ ಕಥಾಹಂದರವು ನಾಟಕೀಯ ಘಟನೆಗಳೊಂದಿಗೆ ಪೌರಾಣಿಕ ಘಮಲನ್ನು ಬೀರುತ್ತಿದೆ ಮತ್ತು ಪರಾಕ್ರಮವನ್ನು ಮೆರೆಯುವ ಕಾರ್ಯಗಳು ಮತ್ತು ಪವಾಡಗಳು ಕಥನಕ್ಕೆ ಮಹಾಕಾವ್ಯದ ಸೊಗಸನ್ನು ನೀಡಿವೆ.

ಮಾನವ ಬದುಕಿನ ನರಳಾಟಗಳು ಮತ್ತು ಯಾತನೆಗಳನ್ನು ಹಾಗೂ ಮನುಷ್ಯರ ದುರಾಸೆಗಳು ಮತ್ತು ದ್ವೇಷಗಳನ್ನು ಈ ಕೃತಿಯು ಎಳೆಎಳೆಯಾಗಿ ಬಿಚ್ಚಿಟ್ಟಿದೆ, ಜೊತೆಗೆ ಕ್ರಿ.ಶ.680ರಲ್ಲಿ ಇರಾಕ್‌ನ ಕರ್ಬಲಾದಲ್ಲಿ ನಡೆದಿದ್ದ ರಕ್ತಪಾತ ಮತ್ತು ಹತ್ಯೆಗಳಿಗೆ ಐತಿಹಾಸಿಕ ಹಿನ್ನೆಲೆಯನ್ನು ಒದಗಿಸಿದೆ.

ಅಲು ಶೋಮೆ ಅವರು ಈ ಮಹಾಕೃತಿಯನ್ನು ‘ಓಷನ್ ಆಫ್ ಮೆಲಂಚೋಲಿ(ವಿಷಾದದ ಮಹಾಸಾಗರ)’ ಎಂಬ ಶೀರ್ಷಿಕೆಯೊಂದಿಗೆ ಇಂಗ್ಲೀಷ್‌ಗೆ ಅನುವಾದಿಸಿದ್ದು,ನಿಯೋಗಿ ಬುಕ್ಸ್ ಪ್ರಕಾಶನ ಸಂಸ್ಥೆಯು ಗುರುವಾರ ಈ ಪುಸ್ತಕವನ್ನು ಬಿಡುಗಡೆಗೊಳಿಸಿದೆ.

ಡಮಾಸ್ಕಸ್‌ನ ದೊರೆಯ ಪುತ್ರ ಯಝೀದ್‌ನಿಂದ ಹತರಾದ ಪ್ರವಾದಿ ಮುಹಮ್ಮದ್(ಸ.ಅ) ಅವರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಅವರ ದುರಂತಗಾಥೆಯ ಸುತ್ತ ಈ ಕೃತಿಯು ರೂಪುಗೊಂಡಿದೆ.

‘‘ನಾನು ಸ್ವಯಂ ಧಾರ್ಮಿಕ ವ್ಯಕ್ತಿಯಲ್ಲ. ಸುದೈವವಶಾತ್ ‘ಬಿಷದ್ ಸಿಂಧು’ ಇಸ್ಲಾಂ ಕುರಿತು ಬಹಳಷ್ಟನ್ನು ತಿಳಿದುಕೊಳ್ಳಲು ನನಗೆ ಅವಕಾಶವನ್ನೊದಗಿಸಿತ್ತು. ಅದರ ಅನುವಾದದ ಮೂಲಕ ನಾನು ನನ್ನ ಧರ್ಮಕ್ಕಿಂತ ಭಿನ್ನವಾದ ಇನ್ನೊಂದು ಧರ್ಮಕ್ಕೆ ನನ್ನ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ ’’ಎಂದು ಅಲು ಶೋಮೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News