ಕ್ಲಬ್‌ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ: ಜೂಜಾಡುತ್ತಿದ್ದ 194 ಜನರ ಬಂಧನ

Update: 2018-09-24 13:31 GMT

ಬೆಂಗಳೂರು, ಸೆ.24: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಆರೋಪದಡಿ ಕ್ಲಬ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 194 ಜನರನ್ನು ಬಂಧಿಸಿ, 38.12 ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.

ಕೆ.ಜಿ.ರಸ್ತೆಯ ಅಲಂಕಾರ್ ಪ್ಲಾಜ, ಬಳೆಪೇಟೆಯ ಮಹಾಲಕ್ಷ್ಮೀ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಕ್ಲಬ್, ದಿ ಮರ್ಚೆಂಟ್ಸ್ ಸೋಶಿಯಲ್ ಕ್ಲಬ್‌ಗಳಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದರು.

ಎರಡೂ ಕ್ಲಬ್‌ಗಳ ಮಾಲಕರು ಸೇರಿದಂತೆ ಒಟ್ಟು 194 ಜನರನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟದಲ್ಲಿ ತೊಡಗಿಸಿದ್ದ 28.12 ಲಕ್ಷ ರೂ. ನಗದು ಹಣ ಹಾಗೂ 16.93 ಲಕ್ಷ ರೂ. ಮೌಲ್ಯದ ಟೋಕನ್, ಎರಡು ನೋಟು ಎಣಿಕೆ ಯಂತ್ರ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News