‘ಪೋಷಣೆ ಅಭಿಯಾನ-ಪೌಷ್ಠಿಕ ಕರ್ನಾಟಕ’ ಯೋಜನೆಗೆ ಸೆ.25ರಂದು ಚಾಲನೆ: ಸಚಿವೆ ಜಯಮಾಲಾ

Update: 2018-09-24 13:37 GMT

ಬೆಂಗಳೂರು, ಸೆ.24: ಗರ್ಭೀಣಿಯರು, ಬಾಣಂತಿಯರು, ಮಕ್ಕಳಲ್ಲಿ ಕಂಡುಬರುವ ಸಮಸ್ಯೆಯನ್ನು ಹೋಗಲಾಡಿಸಲು ‘ಪೋಷಣೆ ಅಭಿಯಾನ-ಪೌಷ್ಠಿಕ ಕರ್ನಾಟಕ’ ಯೋಜನೆಯನ್ನು ಸೆ.25ರಂದು ಸಂಜೆ 4.30ಕ್ಕೆ ವಿಕಾಸಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲಾ ರಾಮಚಂದ್ರ ತಿಳಿಸಿದರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಮಾತನಾಡಿದ ಅವರು, ಕುಂಠಿತ ಬೆಳವಣಿಗೆ, ಎತ್ತರಕ್ಕೆ ತಕ್ಕಂತೆ ತೂಕ, ತೀವ್ರ ರಕ್ತಹೀನತೆ ಮತ್ತು ಕಡಿಮೆ ತೂಕದ ಜನನ ಪ್ರಮಾಣವನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.

ಒಂದು ತಿಂಗಳು ಕಾಲ 19 ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯಲಿದೆ. ನಮ್ಮ ಇಲಾಖೆಯೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯವರು ಕೈ ಜೋಡಿಸುತ್ತಿದ್ದಾರೆ. ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮಹಿಳೆಯರಿಗೆ ಯಾವ ರೀತಿಯ ಆಹಾರ ನೀಡಬೇಕು, ಕೊಬ್ಬಿನಾಂಶ, ಕ್ಯಾಲ್ಸಿಯಂ ಎಷ್ಟು ಪ್ರಮಾಣದಲ್ಲಿರಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.

ಮಾತೃಪೂರ್ಣ ಯೋಜನೆಯನ್ನು ಕಳೆದ ಸಾಲಿನ ಅ.2ರಂದು ಜಾರಿಗೆ ತರಲಾಗಿತ್ತು. ಆನಂತರ ನಾವು ನಡೆಸಿದ ಸಮೀಕ್ಷೆಯಲ್ಲಿ ಶೇ.46ರಷ್ಟು ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆ ಕಂಡು ಬಂದಿರುವುದು ಆತಂಕಕಾರಿಯಾಗಿದೆ. ಆದರೆ, ಮಕ್ಕಳಲ್ಲಿನ ಪ್ರಮಾಣ ಇಳಿಮುಖವಾಗಿರುವುದು ಸಂತಸದ ಸಂಗತಿ. 2012ರಲ್ಲಿ ಶೇ.1.6ರಷ್ಟಿದ್ದ ಮಕ್ಕಳಲ್ಲಿನ ಪ್ರಮಾಣ ಇಂದು ಶೇ.0.39ಗೆ ಇಳಿಕೆಯಾಗಿದೆ ಎಂದು ಜಯಮಾಲಾ ತಿಳಿಸಿದರು.

ರಾಜ್ಯ ಸರಕಾರವು ವಿವಿಧ ಹಂತಗಳಲ್ಲಿ ವಾಸ್ತವಿಕ ಗುರಿಯನ್ನು ನಿಗದಿಪಡಿಸುವ ಪ್ರಯತ್ನ ನಡೆಸಿದೆ. ಗರ್ಭಿಣಿ ಮತ್ತು ಬಾಣಂತಿಯರ ಮಟ್ಟವನ್ನು ಸುಧಾರಿಸಲು ಮಾತೃಪೂರ್ಣ ಯೋಜನೆ, ಸೃಷ್ಟಿ ಮತ್ತು ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ಮಕ್ಕಳಲ್ಲಿನ ಮಟ್ಟವನ್ನು ಹೆಚ್ಚಿಸಲು ಮೊಟ್ಟೆಯನ್ನು ನೀಡಲಾಗುತ್ತಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದ ಎಲ್ಲ 3 ರಿಂದ 6 ವರ್ಷದ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ತೀವ್ರ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ, 5 ಹಿಂದುಳಿದ ಜಿಲ್ಲೆಗಳ ಸಾಧಾರಣಾ ಬೀದರ್, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ) ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮತ್ತು ಶಾಲೆಗಳಲ್ಲಿನ 1 ಕೋಟಿ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಲಾಗುತ್ತಿದೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಗಳಲ್ಲಿ ಹಾಲು ನೀಡಲಾಗುತ್ತಿದೆ ಎಂದು ಜಯಮಾಲಾ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಹಕಾರದೊಂದಿಗೆ ಮಕ್ಕಳ ಸ್ನೇಹಿ ಅಂಗನವಾಡಿಗಳನ್ನು, ಶೌಚಾಲಯಗಳನ್ನು ನಿರ್ಮಿಸಲು ಮತ್ತು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 65911 ಅಂಗನವಾಡಿ ಕೇಂದ್ರಗಳಿದ್ದು, 10.23 ಲಕ್ಷ ಗರ್ಭಿಣಿ ಮತ್ತು ಬಾಣಂತಿಯರು ನೋಂದಾಯಿಸಿಕೊಂಡಿದ್ದಾರೆ. ಅಂಗನವಾಡಿಗಳಲ್ಲಿ 40 ಲಕ್ಷ ಮಕ್ಕಳಿದ್ದಾರೆ. ಅಂಗನವಾಡಿಗಳಿಗೆ ಎಷ್ಟು ಮಕ್ಕಳು, ಮಹಿಳೆಯರು ಭೇಟಿ ನೀಡುತ್ತಾರೆ ಎಂಬುದರ ಬಗ್ಗೆ ನಾವು ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಜಯಮಾಲಾ ತಿಳಿಸಿದರು.

ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಮಾತೃಪೂರ್ಣ ಯೋಜನೆಯ ಗೀತೆ, ಮಾತೃಪೂರ್ಣ ಆಪ್ತ ಸಮಾಲೋಚನೆ ಕೈಪಿಡಿ, ಸ್ನೇಹ ಮೊಬೈಲ್ ಆ್ಯಪ್, ಮಾತೃಪೂರ್ಣ, ಕ್ಷೀರಭಾಗ್ಯ, ಸೃಷ್ಟಿ ಯೋಜನೆಯ ಭಿತ್ತಿಪತ್ರಗಳು, ತರಬೇತಿ ಕೈಪಿಡಿ, ತಾಯಿ-ಮಗುವಿನ ಆರೋಗ್ಯ ಮತ್ತು ಪೋಷಣೆಯ ಪ್ರಮುಖ ಸೇವೆಗಳ ಕರಪತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನಿರ್ದೇಶಕಿ ಡಾ.ಅರುಂದತಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News