ವೇಶ್ಯಾವಾಟಿಕೆ ದಂಧೆ: ಇಬ್ಬರ ಸೆರೆ

Update: 2018-09-24 14:10 GMT

ಬೆಂಗಳೂರು, ಸೆ.24: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಹೊರ ರಾಜ್ಯದಿಂದ ಯುವತಿಯನ್ನು ಮಾನವ ಕಳ್ಳಸಾಗಣೆ ಮೂಲಕ ಕರೆದುಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ.ನಗರದ ಸುಲ್ತಾನ್ ಪಾಳ್ಯ 1ನೆ ಮುಖ್ಯರಸ್ತೆ ನಿವಾಸಿ ತಾಹೀರ್ ಅಹ್ಮದ್(35) ಮತ್ತು ಹಾಸನ ಜಿಲ್ಲೆಯ ಹೊಳೆನರಸೀಪುರದ ದೊಡ್ಡಕುಂಚೇವು ಗ್ರಾಮದ ರಘು ಕೆ.ಪಿ.(28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಟೀಚರ್ಸ್‌ ಕಾಲನಿ, 1ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಹೊರರಾಜ್ಯದಿಂದ ಹೆಣ್ಣು ಮಕ್ಕಳನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆ ತಂದು ವೇಶ್ಯಾವಾಟಿಕೆಗೆ ದೂಡಿದ್ದರು. ಪಶ್ಚಿಮ ಬಂಗಾಳ ಮೂಲದ ಮೂವರು, ಓರ್ವ ಸ್ಥಳೀಯ ಹೆಣ್ಣು ಮಗಳನ್ನು ರಕ್ಷಿಸಲಾಗಿದೆ.

ಆರೋಪಿಗಳಿಂದ 11 ಸಾವಿರ ರೂ.ನಗದು ಮತ್ತು 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News