ಬೆಂಗಳೂರಿನೆಲ್ಲೆಡೆ ಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Update: 2018-09-24 14:17 GMT

ಬೆಂಗಳೂರು, ಸೆ.24: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಾಗರಿಕರಿಗೆ ತೊಂದರೆ ಅನುಭವಿಸುವಂತಾಯಿತು.

ನಗರದ ಕಾರ್ಪೋರೇಷನ್ ವೃತ್ತ, ಆರ್‌ಟಿನಗರ, ಜೆಪಿನಗರ, ಆರ್‌ಆರ್ ನಗರ, ಗೊಟ್ಟಿಗೆರೆ, ಬನ್ನೇರುಘಟ್ಟ, ಬನಶಂಕರಿ, ಯಾರಬ್‌ನಗರ, ಕೆಂಗೇರಿ ಸೇರಿದಂತೆ ಹಲವು ಕಡೆ ನೀರು ಏಕಾಏಕಿ ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ಪರದಾಡಿದರು.

ಎಲ್ಲೆಲ್ಲಿ ನೀರು?: ನಗರದ ಹುಳಿಮಾವು ಕೆರೆಗೆ ಸಂಪರ್ಕಿಸುವ ರಾಜಕಾಲುವೆಯ ನೀರು ಸುತ್ತಲಿನ ಲೇಔಟ್‌ಗಳಿಗೆ ನುಗ್ಗಿದ್ದು, ಪಕ್ಕದಲ್ಲಿದ್ದ ಬಿಡಿಎ ಲೇಔಟ್ ವ್ಯಾಪ್ತಿಯಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲವೆಡೆ ಚರಂಡಿ, ಮಳೆ ನೀರು ಕಾಲುವೆಗಳಲ್ಲಿ ಸರಾಗವಾಗಿ ಹರಿಯದೆ ಉಕ್ಕಿ ಹೊರ ಬರುತ್ತಿದ್ದು, ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು. ರವಿವಾರ ರಾತ್ರಿಯೂ ಸಹ ಸುಮಾರು 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಜಯನಗರ, ಮಲ್ಲೇಶ್ವರಂ, ಮತ್ತಿಕೆರೆ, ಉತ್ತರಹಳ್ಳಿ, ನಾಯಂಡಳ್ಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಜಯನಗರ 4ನೇ ಬ್ಲಾಕ್‌ನಲ್ಲಿ ವಸಂತನಗರ ತಿಮ್ಮಯ್ಯ ವೃತ್ತದ ಬಳಿ ತಲಾ ಒಂದೊಂದು ಮರಗಳು ಧರೆಗುರುಳಿವೆ.

ಮೈಸೂರು ರಸ್ತೆಯ ಮೇಲು ಸೇತುವೆಯಲ್ಲಿ ಮಳೆ ನೀರು ನಿಂತು ನದಿಯಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬನ್ನೇರುಘಟ್ಟ ಪ್ರದೇಶದ ಹಯಗಿರಿ ಅಪಾರ್ಟ್‌ಮೆಂಟ್ ರಸ್ತೆಯಲ್ಲಿ ಮಳೆ ನೀರು ನಿಂತು ನದಿಯಂತಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆಯಾದರೂ ಈ ರಸ್ತೆಯ ನೀರು ಹೊರಹೋಗದೆ ಇದ್ದ ಪರಿಣಾಮ ನಿಂತ ನೀರಿನಲ್ಲಿ ವಾಹನ ಸವಾರರು ವಾಹನ ಚಲಾಯಿಸಿದರು. ಗೊಟ್ಟಿಗೆರೆಯ ಎಂಎಲ್‌ಎ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ನಿಂತಿದ ಕಾರುಗಳು ಜಲಾವೃತಗೊಂಡಿದ್ದವು. ಆದರೆ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ದಾಖಲೆ ಮಳೆ

ಬೆಂಗಳೂರಿನ ಇತಿಹಾಸದಲ್ಲಿ 1988 ಸೆಪ್ಟೆಂಬರ್ 12 ರಂದು ಸುರಿದಿದ್ದ 177.6 ಮಿ.ಮೀಟರ್ ಮಳೆಯೇ ಇಲ್ಲಿಯವರೆಗೆ ದಾಖಲೆಯಾಗಿತ್ತು. ಆದರೆ ಸೋಮವಾರ ಮುಂಜಾನೆ ಸುರಿದ ಭಾರೀ ಮಳೆ 1988 ರ ದಾಖಲೆಯನ್ನೂ ಸರಿಗಟ್ಟಿದೆ ಎನ್ನಲಾಗಿದೆ. ನಗರದ ಕನಕಪುರ ರಸ್ತೆಯಲ್ಲಿನ ಅಂಜನಾಪುರದಲ್ಲಿ ರವಿವಾರ ರಾತ್ರಿ 206 ಮಿ.ಮೀಟರ್ ಮಳೆಯಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ. ನಗರದಲ್ಲಿ ಇನ್ನೂ ಎರಡು ಮೂರು ದಿನ ಇದೇ ರೀತಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ವಿಪತ್ತು ನಿರ್ವಹಣಾ ಕೇಂದ್ರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News