ವಿಧಾನ ಪರಿಷತ್ ಉಪಚುನಾವಣೆ: ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ನಿಶ್ಚಿತ

Update: 2018-09-24 14:37 GMT

ಬೆಂಗಳೂರು, ಸೆ. 24: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಅ.4ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸಿನ ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್, ಜೆಡಿಎಸ್‌ನ ರಮೇಶ್‌ಗೌಡ ಸೇರಿದಂತೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್-ಜೆಡಿಎಸ್‌ನ ಮೂವರು ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ.

ವಿಪಕ್ಷ ಬಿಜೆಪಿ ಉಪ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅಭ್ಯರ್ಥಿ ಗೆಲುವಿಗೆ ಅಗತ್ಯ ಸಂಖ್ಯಾಬಲದ ಕೊರತೆ ಹಿನ್ನೆಲೆಯಲ್ಲಿ ಬಿಜೆಪಿ ‘ಯುದ್ಧಕ್ಕೂ ಮೊದಲೆ ಶಸ್ತ್ರಾಸ್ತ್ರ ಕಳಚಿದರು’ ಎಂಬಂತೆ ಚುನಾವಣಾ ಕಣದಿಂದ ಹಿಂದೆ ಸರಿದಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಮೊದಲ ಗೆಲುವು ಸಿಕ್ಕಂತೆ ಆಗಿದೆ.

ನಾಮಪತ್ರ ಸಲ್ಲಿಕೆಗೆ ಇಂದು(ಸೆ.24) ಕೊನೆ ದಿನವಾಗಿತ್ತು. ಆ ಹಿನ್ನೆಲೆಯಲ್ಲಿ ಕಾಂಗ್ರೆಸಿನಿಂದ ನಸೀರ್ ಅಹ್ಮದ್ ಹಾಗೂ ಎಂ.ಸಿ.ವೇಣುಗೋಪಾಲ್ ಅವರು, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಝಮೀರ್ ಅಹ್ಮದ್‌ ಖಾನ್, ಕೃಷ್ಣಭೈರೇಗೌಡ, ಸಂಸದರಾದ ಕೆ.ಎಚ್.ಮುನಿಯಪ್ಪ, ಸೈಯದ್ ನಸೀರ್ ಹುಸೇನ್ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಇನ್ನು ಹತ್ತೇ ಹತ್ತು ನಿಮಿಷ ಬಾಕಿ ಇರುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಏಕಾಂಗಿಯಾಗಿ ವಕೀಲರ ಜತೆ ಆಗಮಿಸಿದ ರಮೇಶ್‌ಗೌಡ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಗಳಾಗಿ ವೆಂಕಟೇಶ್ವರ ಸ್ವಾಮೀಜಿ ಯಾನೆ ಕಟಕದೊಂಡ ಜಿ. ಹಾಗೂ ಹರಿಶ್ಚಂದ್ರಗೌಡ ನಾಮಪತ್ರ ಸಲ್ಲಿಸಿದ್ದಾರೆ.

ಪರಿಷತ್ತಿನ ಮೂರು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಕೆ.ಎಸ್. ಈಶ್ವರಪ್ಪನವರಿಂದ ತೆರವಾದ ಸ್ಥಾನಕ್ಕೆ ನಸೀರ್ ಅಹ್ಮದ್ ಹಾಗೂ ಹರಿಶ್ಚಂದ್ರಗೌಡ ನಾಮಪತ್ರ ಸಲ್ಲಿಸಿದ್ದಾರೆ. ಡಾ.ಪರಮೇಶ್ವರ್‌ರಿಂದ ತೆರವಾದ ಸ್ಥಾನಕ್ಕೆ ಎಂ.ಸಿ. ವೇಣುಗೋಪಾಲ್ ನಾಮಪತ್ರ ಸಲ್ಲಿಸಿದ್ದಾರೆ.

ವಿ.ಸೋಮಣ್ಣ ಅವರಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್‌ನ ರಮೇಶ್‌ಗೌಡ ಹಾಗೂ ಪಕ್ಷೇತರ ಅಭ್ಯರ್ಥಿ ವೆಂಕಟೇಶ್ವರ ಸ್ವಾಮಿ ಉಮೇದುವಾರಿಕೆ ಸಲ್ಲಿಸಿದ್ದು, ನಾಳೆ (ಸೆ.25) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಸೆ.27ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಪಕ್ಷೇತರ ಅಭ್ಯರ್ಥಿಗಳಾಗಿರುವ ವೆಂಕಟೇಶ್ವರ ಸ್ವಾಮಿ ಹಾಗೂ ಹರಿಶ್ಚಂದ್ರಗೌಡ ಅವರಿಗೆ ಸೂಚಕರ ಸಹಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ. ಮೂರು ಸ್ಥಾನಗಳಿಗೆ ಕಾಂಗ್ರೆಸಿನ ಇಬ್ಬರು ಹಾಗೂ ಜೆಡಿಎಸ್ ಓರ್ವ ಸೇರಿ ಮೂವರು ಕಣದಲ್ಲಿ ಉಳಿಯಲಿದ್ದು, ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಅ.4ರಂದೇ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ.

ಕೆ.ಎಸ್.ಈಶ್ವರಪ್ಪ ಹಾಗೂ ಡಾ.ಜಿ.ಪರಮೇಶ್ವರ್ ಅವರಿಂದ ತೆರವಾಗಿದ್ದ ಸ್ಥಾನದ ಅವಧಿ 2020ರ ಜೂನ್ 30ರ ವರೆಗೆ ಹಾಗೂ ವಿ.ಸೋಮಣ್ಣ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನದ ಅವಧಿ 2022ರ ಜೂನ್ 14ರ ವರೆಗೆ ಇರಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದು, ನಾಳೆ(ಸೆ.25) ನಾಮಪತ್ರ ಪರಿಶೀಲನೆ ನಡೆಯಲಿದೆ. ಸೆ.27ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ’

-ಕುಮಾರಸ್ವಾಮಿ, ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News