ಜಿಮ್ ತರಬೇತುದಾರನ ಮೇಲೆ ಹಲ್ಲೆ ಪ್ರಕರಣ: ನಟ ವಿಜಯ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಕೋರ್ಟ್

Update: 2018-09-24 14:59 GMT

ಬೆಂಗಳೂರು, ಸೆ.24: ಜಿಮ್ ತರಬೇತುದಾರ ಮಾರುತಿ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣ ಸಂಬಂಧ ನಟ ದುನಿಯಾ ವಿಜಯ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ಆದೇಶ ಸೆ.26 ಕ್ಕೆ ಕಾಯ್ದಿರಿಸಿದೆ.

ನಗರದ 8ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ವಿಜಯ್ ಹಾಗೂ ಸಹಚರರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿರುವ ಕಾರಣ ದುನಿಯಾ ವಿಜಯ್ ಪರ ವಕೀಲ ನ್ಯಾಯಾಲಯದ ಮೊರೆ ಹೋಗಿದ್ದು, ಮಧ್ಯಂತರ ಜಾಮೀನು ಕೋರಿ ಸೋಮವಾರ ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ 8ನೇ ಎಸಿಎಂಎಂ ನ್ಯಾಯಾಲಯವು ಸೆ. 26ಕ್ಕೆ ಮುಂದೂಡಿದೆ. ನ್ಯಾ.ಮಹೇಶ್ ಬಾಬು ಅವರು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದು, ಸೆ. 26ಕ್ಕೆ ಆದೇಶ ನೀಡುವುದಾಗಿ ಪ್ರಕಟಿಸಿದ್ದಾರೆ.

ಪೊಲೀಸರ ಕುತಂತ್ರ: ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಶಿವಕುಮಾರ್, ಪೊಲೀಸರು ಕುತಂತ್ರದಿಂದ ಜಾಮೀನು ಸಿಗದಂತೆ ಮಾಡಿದ್ದಾರೆ. ಯಾವುದೇ ಅಸ್ತ್ರ ಬಳಸಿ ಹಲ್ಲೆ ಮಾಡಿಲ್ಲ, ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಹೇಳಿಕೆ ನೀಡಿದ್ದಾರೆ. ನಂತರ ವೈದ್ಯರ ಸಮಕ್ಷಮದಲ್ಲಿ ಹೇಳಿಕೆ ಪಡೆಯುವಾಗ ಆಯುಧ ಬಳಸಿದ್ದಾರೆಂದು ಹೇಳಿಕೆ ಬದಲಾಯಿಸಿದ್ದಾರೆಂದು ವಾದಿಸಿದರು.

ಬಳಿಕ ಸರಕಾರಿ ಪರ ವಕೀಲ ಅರುಣ್ ವಾದ ಮಂಡಿಸಿ, ಆರೋಪಿ ತುಂಬಾ ಪ್ರಭಾವಿಯಾಗಿದ್ದಾರೆ. ಗಾಯಾಳು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಬಾ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ವಾದ ಮಂಡಿಸಿದ್ದಾರೆ. ಎರಡು ಕಡೆ ವಾದ ಆಲಿಸಿದ ನ್ಯಾಯಮೂರ್ತಿ ಮಹೇಶ್ ಬಾಬು ವಿಚಾರಣೆಯನ್ನು ಸೆ.26 ಕ್ಕೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದು, ಬುಧವಾರ ಜಾಮೀನು ಆದೇಶ ಹೊರಬೀಳಲಿದೆ.

ಪ್ರಸಾದ್ ಮೇಲೆ ಪ್ರಕರಣ: ಜಿಮ್ ತರಬೇತುದಾರ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಎ-1 ಆರೋಪಿ ಆಗಿರುವ ಜಿಮ್ ಟ್ರೈನರ್ ಪ್ರಸಾದ್ ಸೆ.6 ರಂದು ತನ್ನದೇ ಜಿಮ್ನಲ್ಲಿ ಕೋಚ್ ಆಗಿದ್ದ ಯುವಕನಿಗೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪ್ರಶಾಂತನಗರದಲ್ಲಿರುವ ಫಿಟ್ ನೆಸ್ ನೈನ್ ಎಂಬ ಜಿಮ್ನಲ್ಲಿ ಜಗದೀಶ್ ಎಂಬ ಯುವಕನಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ದೂರು ನೀಡಿದರೆ ಕೊಲೆ ಮಾಡುವುದಾಗಿ ಮತ್ತು ಮನೆಯವರಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆದರೆ, ಇದೀಗ ಆರೋಪಿ ಪ್ರಸಾದ್ ವಿರುದ್ಧ ಜಗದೀಶ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಹಿಷ್ಕಾರವಿಲ್ಲ

ಇದು ವೈಯಕ್ತಿಕ ವಿಷಯ. ಆದ್ದರಿಂದ ನಾವು ಚಿತ್ರರಂಗದಿಂದ ನಟ ದುನಿಯಾ ವಿಜಯ್ ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

-ಎಸ್.ಎ.ಚಿನ್ನೇಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News