ಪಿಎಲ್‌ಡಿ ಬ್ಯಾಂಕ್‌ಗಳಿಗೂ ಸಾಲ ಮನ್ನಾ ವಿಸ್ತರಿಸಲು ಆಗ್ರಹ

Update: 2018-09-24 15:04 GMT

ಬೆಂಗಳೂರು, ಸೆ.24: ಪಿಎಲ್‌ಡಿ ಬ್ಯಾಂಕ್‌ಗಳನ್ನೂ ಸಾಲ ಮನ್ನಾ ಅಡಿಯಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಒಕ್ಕೂಟ ಆಗ್ರಹಿಸಿದೆ.

ಸೋಮವಾರ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಅಧ್ಯಕ್ಷರ ಮತ್ತು ವ್ಯವಸ್ಥಾಪಕರುಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಸರಕಾರ ಘೋಷಣೆ ಮಾಡಿರುವ ಸಾಲ ಮನ್ನಾದಿಂದ ವಂಚನೆಯಾಗುತ್ತಿದ್ದು, ದೀರ್ಘಾವಧಿ ಸಾಲ ನೀಡುವ ಪಿಎಲ್‌ಡಿ ಬ್ಯಾಂಕ್‌ಗಳ ಕಾರ್ಯಚಟುವಟಿಕೆ ಸ್ಥಗಿತಗೊಳ್ಳುತ್ತಿದೆ. ಬ್ಯಾಂಕ್‌ಗಳು ನೀಡಿರುವ ಸಾಲವನ್ನು ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ನಬಾರ್ಡ್ ಶೇ.70 ರಷ್ಟು ವಸೂಲಿ ಮಾಡಿದಿದ್ದರೆ, ಹಣಕಾಸಿನ ನೆರವು ನೀಡುವುದಿಲ್ಲ ಎಂದು ಹೇಳುತ್ತಿದೆ ಎಂದು ಬ್ಯಾಂಕ್‌ಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ ಕೆ.ಷಡಕ್ಷರಿ, ಪ್ರಕೃತಿ ವಿಕೋಪ ಸೇರಿದಂತೆ ಮತ್ತಿತರೆ ಕಾರಣಗಳಿಂದ ಸಾಲ ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಿಎಲ್‌ಡಿ ಬ್ಯಾಂಕ್‌ಗಳು ಭಾರಿ ನಷ್ಟವನ್ನು ಅನುಭವಿಸುವಂತಾಗಿದೆ. ಅಲ್ಲದೆ, ನಬಾರ್ಡ್‌ನಿಂದ ಸಾಲ ಧೋರಣೆಯಿಂದ ಸಾಲ ಹಂಚಿಕೆಯನ್ನು ಸ್ಥಗಿತಗೊಳಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಸ್ಪಂದಿಸಿ ಮಾತನಾಡಿದ ಸಚಿವ ಬಂಡೆಪ್ಪ ಕಾಶೆಂಪೂರ್, ಸಾಲ ಮನ್ನಾವನ್ನು ಸಹಕಾರಿ ಸಂಘಗಳ ವ್ಯಾಪ್ತಿಗೆ ವಿಸ್ತರಿಸುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ. ಇನ್ನುಳಿದಂತೆ ನಬಾರ್ಡ್ ಹಣ ನೀಡಲು ಶೇ.70 ರಷ್ಟು ಸಾಲ ವಸೂಲಿ ಮಾಡಬೇಕು ಎಂಬುದು ಸರಕಾರಕ್ಕೆ ಸಂಬಂಧಿಸಿದಲ್ಲ. ಸರಕಾರ ರೈತರಿಗೆ ಎಲ್ಲ ರೀತಿಯಲ್ಲಿಯೂ ನೆರವು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಹಿಂದಿನ ಸರಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಿಸುಮಾರು 17 ಸಾವಿರ ಕೋಟಿ ರೂ.ಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ಅದರಲ್ಲಿ ಈಗಾಗಲೇ 2500 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಇನ್ನುಳಿದ ಹಣವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂದರು.

ಪಿಎಲ್‌ಡಿ ಬ್ಯಾಂಕ್‌ಗಳ ಮೂಲಕ ಒಂದು ಲಕ್ಷ ಕೋಟಿ ರೂ.ಗಳಷ್ಟು ಸಾಲವನ್ನು ನೀಡಲಾಗಿದೆ. ಅದರ ಜತೆಗೆ ಬೆಳೆ ಸಾಲ ಅಲ್ಲದೆ, ದೀರ್ಘಾವಧಿ ಸಾಲ, ಮನೆ, ಭೂಮಿ ಖರೀದಿಗೆ, ಮೋಟಾರ್ ವಾಹನ ಖರೀದಿಗೆ ಸೇರಿದಂತೆ ಹಲವಾರು ಸಾಲವನ್ನು ನೀಡಲಾಗುತ್ತಿದೆ. ಅದನ್ನು ಸಮಯಕ್ಕೆ ಸರಿಯಾಗಿ ವಸೂಲಿ ಮಾಡಬೇಕಾಗಿರುವುದು ಬ್ಯಾಂಕ್‌ಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಬಾರ್ಡ್‌ನ ಕರ್ನಾಟಕ ಪ್ರಾಂತೀಯ ಮಹಾಪ್ರಬಂಧಕ ಸೂರ್ಯಪ್ರಕಾಶ್ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳನ್ನು ಮನೆಯ ಮಕ್ಕಳನ್ನು ಬೆಳೆಸಿದ ರೀತಿಯಲ್ಲಿ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು. ಆದರೆ, ರಾಜ್ಯದಲ್ಲಿರುವ 178 ಪಿಎಲ್‌ಡಿ ಬ್ಯಾಂಕ್‌ಗಳಿಂದ 191 ಕೋಟಿ ರೂ.ಗಳು ಸಾಲ ವಸೂಲಿ ಮಾಡಲಾಗಿದೆ. ಇದು ಸಾಕಾಗುವುದಿಲ್ಲ ಎಂದ ಅವರು, ದೇಶದಲ್ಲಿರುವ ಸಹಕಾರಿ ಬ್ಯಾಂಕ್‌ಗಳು ಹೀನಾಯಸ್ಥಿತಿಯನ್ನು ತಲುಪಿವೆ, ಬಹಳಷ್ಟು ಮುಚ್ಚಿವೆ ಎಂದರು.

ಗದ್ದಲಮಯ ವೇದಿಕೆ

ರಾಜ್ಯ ಸರಕಾರ ಸುಸ್ಥಿರ ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ರೈತರಿಂದ ಸಹಕಾರಿ ಬ್ಯಾಂಕ್‌ಗಳು ಸಾಲ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಶೇ.70 ರಷ್ಟು ಸಾಲ ವಸೂಲಿ ಮಾಡಿದವರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಬ್ಯಾಂಕ್‌ಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರು ಸಚಿವರೊಂದಿಗೆ ವಾಗ್ದಾಳಿ ನಡೆಸಿದ ಪರಿಣಾಮ ವೇದಿಕೆಯಲ್ಲಿದ್ದವರು ಎಲ್ಲರೂ ಉತ್ತರ ನೀಡುವ ಮೂಲಕ ಸಂಪೂರ್ಣ ಗದ್ದಲದೊಂದಿಗೆ ಸಭೆ ಮುಕ್ತಾಯಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News