ಪುಸ್ತಕ ಓದಿನ ಹುಚ್ಚು ಬೆಳೆಸಿಕೊಳ್ಳಿ: ಡಾ.ಚಿದಾನಂದಮೂರ್ತಿ

Update: 2018-09-24 15:07 GMT

ಬೆಂಗಳೂರು, ಸೆ.24: ಪುಸ್ತಕ ಪ್ರೇಮಕ್ಕಿಂತ ಪುಸ್ತಕ ಓದುವ ಹುಚ್ಚನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಿಸಿದ್ದಾರೆ.

ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದ ಚಿ.ಮು. ಮನೆಯಂಗಳದಲ್ಲಿ ಆಯೋಜಿಸಿದ್ದ ನಿಮ್ಮ ಮನೆಗೆ ನಮ್ಮ ಪುಸ್ತಕ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಮೈಸೂರಿನಲ್ಲಿದ್ದ ಸಂದರ್ಭದಲ್ಲಿ ಪುಸ್ತಕ ಪ್ರೇಮಕ್ಕಿಂತ ಪುಸ್ತಕದ ಹುಚ್ಚನ್ನು ಬೆಳೆಸಿಕೊಂಡಿದ್ದೆ ಎಂದರು.

ಮೈಸೂರಿನ ಅರಮನೆ ಹಿಂಬಾಗದಲ್ಲಿದ್ದ ಪುಸ್ತಕ ಮಳಿಗೆಗೆ ಪ್ರತಿ ರವಿವಾರದಂದು ಭೇಟಿ ನೀಡಿ ಹಲವಾರು ಹಳೆ ಪುಸ್ತಕಗಳನ್ನು ಹುಡುಕಿ ಖರೀದಿ ಮಾಡುತ್ತಿದ್ದೆ. ಒಂದು ದಿನ ಪುಸ್ತಕ ಹುಡುಕುತ್ತಿದ್ದಾಗ ರವೀಂದ್ರನಾಥ ಟ್ಯಾಗೂರ್ ಅವರ ಹಸ್ತಾಕ್ಷರವಿದ್ದ ಪುಸ್ತಕ ಸಿಕ್ಕಿತು. ಅದು ನನಗೆ ಅಪಾರವಾದ ಸಂತೋಷವನ್ನುಂಟು ಮಾಡಿತ್ತು ಹಾಗೂ ಅದು ನನಗೆ ಪ್ರೇರಣೆಯಾಯಿತು ಎಂದ ಅವರು, ಪುಸ್ತಕ ಓದುವ ಹುಚ್ಚನ್ನಿಡಿಸಿಕೊಂಡಿದ್ದರಿಂದಲೇ ನಾನಿಂದು ಇಷ್ಟು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಪುಸ್ತಕಗಳ ಓದು ಮನುಷ್ಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಲದೆ, ಜ್ಞಾನದ ಅರಿವು ಹೆಚ್ಚುತ್ತದೆ.ಆಧುನಿಕ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನದ ನಡುವೆ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳ ಮೂಲಕ ಪುಸ್ತಕ ಓದುಗರನ್ನು ಹೆಚ್ಚಿಸುವ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ವಿವರಿಸಿದರು.

ಲೇಖಕಿ ಪ್ರೇಮಾಭಟ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟಿವಿ ಮಾಧ್ಯಮದ ಪ್ರಭಾವದಿಂದಾಗಿ ಪತ್ರಿಕೆಗಳನ್ನು ಓದುವ ಅಭ್ಯಾಸ ನಶಿಸಿ ಹೋಗುತ್ತಿದೆ ಎಂದ ಅವರು, ಪುಸ್ತಕಗಳನ್ನು ಪ್ರೀತಿಸಿ, ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಆದರೆ, ಇಂದಿನ ತಲೆಮಾರಿನ ಓದುಗರು ಹಿಂದಿನ ಲೇಖಕರು, ಸಾಹಿತಿಗಳನ್ನು ಕಡೆಗಣಿಸುವುದನ್ನು ಕಾಣುತ್ತಿದ್ದೇವೆ. ಹೀಗಾಗಿ, ಎಲ್ಲರೂ ಎಲ್ಲ ಕಾಲದಲ್ಲಿಯೂ ಪ್ರಸ್ತುತವಾಗುತ್ತಾರೆ. ಎಲ್ಲರ ಸಾಹಿತ್ಯವನ್ನೂ ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಐಟಿ-ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ದಿನನಿತ್ಯದ ಒತ್ತಡದ ಜಂಜಾಟದಲ್ಲಿ ಕಾಲ ಕಳೆಯುತ್ತಿರುತ್ತಾರೆ. ಅಂತಹವರು ಪುಸ್ತಕ ಓದುವುದನ್ನು ರೂಢಿಸಿಕೊಂಡರೆ ಅವರ ಒತ್ತಡದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದ ಅವರು, ಹಣ ವ್ಯಯಿಸಿ ಪುಸ್ತಕಗಳನ್ನು ಪ್ರಕಟ ಮಾಡಿದರೂ, ಅದಕ್ಕೆ ಸರಿಯಾದ ಮಾರುಕಟ್ಟೆ ಸೌಲಭ್ಯದ ಕೊರತೆಯಿಂದಾಗಿ ಪುಸ್ತಕಗಳು ಮಾರಾಟವಾಗದೇ ಉಳಿಯುತ್ತಿವೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದರು.

ಲೇಖಕಿ ಡಾ.ಎಲ್.ಜಿ.ಮೀರಾ ಮಾತನಾಡಿ, ಪುಸ್ತಕಗಳು ಇರುವವರು ಎಂದಿಗೂ ಒಂಟಿಯಾಗಿ ಜೀವಿಸಲು ಸಾಧ್ಯವಿಲ್ಲ. ಪುಸ್ತಕದ ಓದು ಮನುಷ್ಯನಲ್ಲಿನ ಒಂಟಿತನವನ್ನು ದೂರ ಮಾಡಿ, ಹೊಸ ಕುಟುಂಬ, ಓದುಗರ ಬಳಗವನ್ನು ಸೃಷ್ಟಿಸುತ್ತದೆ. ಹೆಚ್ಚು ಹೆಚ್ಚು ಓದುಗರು ಹುಟ್ಟಿಕೊಳ್ಳುವ ಮೂಲಕ ಕನ್ನಡ ಪುಸ್ತಕ ಸಂಸ್ಕೃತಿಗೆ ಜೀವ ಕೊಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕಿ ಮಂಗಳಾ ಪ್ರಿಯದರ್ಶಿನಿ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಪಾತಣ್ಣ, ದೊಡ್ಡೇಗೌಡ ಉಪಸ್ಥಿತರಿದ್ದರು.

ಪುಸ್ತಕ ಪ್ರೀತಿ ಎಂಬುದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಆದರೆ, ಅದಕ್ಕೆ ತಕ್ಕಂತೆ ನಮ್ಮ ಸುತ್ತಮುತ್ತ ಓದುವ ವಾತಾವರಣವನ್ನು ಸೃಷ್ಟಿಸಬೇಕು. ಪ್ರೇಮ ಎಂಬುದು ಹುಚ್ಚಾದರೆ ಪುಸ್ತಕ ಓದುವ ಹವ್ಯಾಸ ಹೆಚ್ಚಾಗುತ್ತದೆ.

-ಮಂಗಳಾ ಪ್ರಿಯದರ್ಶಿನಿ, ಲೇಖಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News