ತ್ರಿಭಾಷಾ ಸೂತ್ರ ಪಾಲನೆ ಕಡ್ಡಾಯ: ಪ್ರೊ. ಎಸ್.ಜಿ.ಸಿದ್ದರಾಮಯ್ಯ ಸೂಚನೆ

Update: 2018-09-24 15:15 GMT

ಬೆಂಗಳೂರು, ಸೆ. 24: ಕೇಂದ್ರ ಸರಕಾರಿ ಕಚೇರಿಗಳು, ಉದ್ದಿಮೆಗಳು ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಭಾಷಾ ನೀತಿಯನ್ವಯ ತ್ರಿಭಾಷಾ ಸೂತ್ರ ಪಾಲಿಸುವುದು ಮತ್ತು ಸ್ಥಳೀಯ ಭಾಷೆಗೆ ಪ್ರಾತಿನಿಧ್ಯ ನೀಡುವುದು ಕಡ್ಡಾಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಕೋರಮಂಗಲದಲ್ಲಿರುವ ಪ್ರಾದೇಶಿಕ ರಹದಾರಿ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೇಂದ್ರ ಗೃಹ ಸಚಿವಾಲಯವೇ 1995ರ ಫೆಬ್ರವರಿ 6ರಲ್ಲಿ ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ಮತ್ತು ಸ್ಥಳೀಯ ಭಾಷೆಗೆ ಪ್ರಾತಿನಿಧ್ಯ ನೀಡುವಂತೆ ಸೂಚಿಸಿದ್ದರೂ, ಕೇಂದ್ರ ಸರಕಾರದ ಕೆಲ ಇಲಾಖೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಕಚೇರಿಗಳು ಹಿಂದಿ ಭಾಷೆಯೊಂದೇ ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂವಿಧಾನ ಮಾನ್ಯಮಾಡಿರುವ 22 ಭಾಷೆಗಳೂ ರಾಷ್ಟ್ರಭಾಷೆಗಳೇ ಎಂದು ಪ್ರೊ.ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಾದೇಶಿಕ ರಹದಾರಿ ಕಚೇರಿಯಲ್ಲಿನ ಅಂತರ್ಜಾಲ ತಾಣದಲ್ಲಿ ಕನ್ನಡದ ಆಯ್ಕೆ ನೀಡದಿರುವುದು, ಸೇವಾ ಕೇಂದ್ರಗಳಲ್ಲಿನ ಪಾಸ್‌ಫೋರ್ಟ್ ಅರ್ಜಿ ನಮೂನೆಗಳು ಮತ್ತು ಕಚೇರಿಯ ಪತ್ರಗಳ ತಲೆಬರಹಗಳು, ಮೊಹರುಗಳು ಕನ್ನಡದಲ್ಲಿ ಇಲ್ಲ. ನಾಮಫಲಕಗಳಲ್ಲಿ, ಸೂಚನಾ ಫಲಕಗಳಲ್ಲಿ, ಸ್ಥಳೀಯ ಜಾಹಿರಾತುಗಳಲ್ಲಿ, ಪತ್ರಗಳ ತಲೆಬರಹಗಳಲ್ಲಿ, ಮೊಹರುಗಳಲ್ಲಿ ಕನ್ನಡವನ್ನು ಬಳಕೆ ಮಾಡುವುದು ಪ್ರಾದೇಶಿಕ ರಹದಾರಿ ಅಧಿಕಾರಿಯ ಅಧಿಕಾರ ವ್ಯಾಪ್ತಿಯಲ್ಲೇ ಇರುವುದರಿಂದ ಕೂಡಲೇ ಅದನ್ನು ಜಾರಿಗೆ ತರಬೇಕು ಎಂದು ಅವರು ಸೂಚನೆ ನೀಡಿದರು.

ಅಂತರ್ಜಾಲದಲ್ಲಿ ಕನ್ನಡವನ್ನು ಅಳವಡಿಸುವುದು, ಕಚೇರಿಯ ಗಣಕಯಂತ್ರದಲ್ಲಿ ಕನ್ನಡ ತಂತ್ರಾಂಶವನ್ನು ಬಳಸುವುದು, ಸ್ಥಳೀಯ ಕಚೇರಿಗಳಲ್ಲಿ ‘ಸಿ’ ಮತ್ತು ‘ಡಿ’ ವೃಂದದ ನೌಕರಿಯಲ್ಲಿ ಗುತ್ತಿಗೆ ಹೊರಗುತ್ತಿಗೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯ ಮೇರೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾದೇಶಿಕ ರಹದಾರಿ ಅಧಿಕಾರಿಗೆ ನಿರ್ದೇಶನ ನೀಡಿದರು. ಇದಕ್ಕೆ ಸ್ಪಂದಿಸಿದ ಪ್ರಾದೇಶಿಕ ರಹದಾರಿ ಅಧಿಕಾರಿ ಭರತ್ ಕುಮಾರ್ ಕುತಾಟಿ, ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಕ್ರಮಗಳನ್ನು ಕೂಡಲೇ ಕೈಗೊಳ್ಳುವುದಾಗಿ ಮತ್ತು ಪ್ರಾಧಿಕಾರದ ಸಲಹೆ ಸೂಚನೆಯನ್ವಯ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಹುಮುಖ್ಯವಾಗಿ ಪ್ರಾದೇಶಿಕ ರಹದಾರಿ ಕಚೇರಿಯಲ್ಲಿ ಕನ್ನಡ ಘಟಕವನ್ನು ಪ್ರಾರಂಭಿಸಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಲಿಕಾ ಶಿಬಿರವನ್ನು ಪ್ರಾಧಿಕಾರದ ಸಹಾಯದಿಂದ ಹಮ್ಮಿಕೊಳ್ಳುವಂತೆ ಸೂಚಿಸಿದ ಪೊ.ಸಿದ್ದರಾಮಯ್ಯ, ಕನ್ನಡ ಘಟಕಕ್ಕೆ ಕನ್ನಡಬಲ್ಲ ಅಧಿಕಾರಿಯೊಬ್ಬರನ್ನು ನೇಮಿಸಿ ಕಾಲಕಾಲಕ್ಕೆ ಕಚೇರಿಯಲ್ಲಿನ ಕನ್ನಡ ಅನುಷ್ಠಾನದ ಪ್ರಗತಿ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದರು. ಸ್ಥಳೀಯ ಭಾಷಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಚೇರಿಯ ಕಾರ್ಯ ಚಟುವಟಿಕೆಗಳಿರಬೇಕೆಂದು ತಿಳಿಸಿದ ಅವರು, ಸ್ಥಳೀಯರು ವಿದೇಶಕ್ಕೆ ತೆರಳಲು ಭಾಷೆಯ ತೊಡಕಾಗದಂತೆ ಮತ್ತು ಮಧ್ಯವರ್ತಿಗಳನ್ನು ಅವಲಂಬಿಸದಂತೆ ಪ್ರಾದೇಶಿಕ ರಹದಾರಿ ಕಚೇರಿಯಲ್ಲಿ ಎಲ್ಲ ಸೇವೆಗಳನ್ನೂ ಕನ್ನಡದಲ್ಲಿಯೂ ನೀಡುವಂತೆ ಸೂಚಿಸಿದರು.

ಪ್ರೊ.ಚಂದ್ರಶೇಖರ ಪಾಟೀಲ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಸದಸ್ಯರಾದ ಪ್ರಭಾಕರ್ ಪಟೇಲ್, ಗಿರೀಶ್ ಪಟೇಲ್, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜೆ.ನರಸಿಂಹಮೂರ್ತಿ, ಡಾ.ವೀರಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News