ರಾಜ್ಯ ರಾಜಧಾನಿಯಲ್ಲಿ ಶೇ.48 ರಷ್ಟು ಮಾತ್ರ ಕನ್ನಡಿಗರು: ಪಿ.ಜಿ.ಆರ್.ಸಿಂಧ್ಯಾ ಬೇಸರ

Update: 2018-09-24 15:40 GMT

ಬೆಂಗಳೂರು, ಸೆ.24: ರಾಜಧಾನಿ ಬೆಂಗಳೂರಿನಲ್ಲಿ ಶೇ.48ರಷ್ಟು ಮಾತ್ರ ಕನ್ನಡಿಗರಿದ್ದು, ಶೇ.52ರಷ್ಟು ಮಂದಿ ಅನ್ಯಭಾಷಿಗರಿರುವುದು, ಕನ್ನಡ ನಾಡು-ನುಡಿಯ ದುರಂತ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಆಯೋಜಿಸಿದ್ದ, ಜಿನಾಕು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಬುರಗಿಯಿಂದ ಚಾಮರಾಜನಗರದವರೆಗೆ ದಕ್ಷಿಣ ಕನ್ನಡದಿಂದ ಚಿತ್ರದುರ್ಗದವರೆಗಿರುವ ಕನ್ನಡಿಗರು ನಗರಕ್ಕೆ ಬಂದರೆ 20 ವರ್ಷಗಳ ನಂತರ 2 ಕೋಟಿ ಜನಸಂಖ್ಯೆ ಏರುವುದಿಲ್ಲ, ಅನ್ಯರಾಜ್ಯದವರ ವಲಸೆಯಿಂದ ನಗರವು ಅನ್ಯಮಯವಾಗಿ ಜನಸಂಖ್ಯೆ ಏರುತ್ತಿದೆ ಎಂದು ಆತಂಕಪಟ್ಟರು.

ರಾಜಕೀಯ ಹಿತಾಸಕ್ತಿಯಿಂದ ಬೆಳಗಾವಿಯ ವಿಭಜನೆಗೆ ಕೆಲವರು ಮಾತನಾಡುತ್ತಿರುವುದು ಖಂಡನೀಯವಾದದ್ದು, ಅಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕೆ ಹೊರತು ವಿಭಜನೆಯಾಗಬಾರದು. ಆಡಳಿತದ ಅನುಕೂಲಕ್ಕಾಗಿ ಬೇಕಾದರೆ ಸೂಕ್ತ ವಿಂಗಡಣೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಅವರು ಸರಕಾರಕ್ಕೆ ಸಲಹೆ ಮಾಡಿದರು.

ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಪೋಷಕರು ಬೆಳೆಸಿಕೊಂಡು, ಮಕ್ಕಳಲ್ಲಿ ಭಾಷಾಭಿಮಾನವನ್ನು ಬೆಳೆಸಬೇಕು. ಬಿಬಿಎಂಪಿ ಪ್ರಾಥಮಿಕ ಶಾಲೆಗಳನ್ನು ಗಮನಿಸಿದಾಗ ಮಕ್ಕಳಲ್ಲಿನ ಕನ್ನಡ ಭಾಷಾ ಬಳಕೆ ಕಡಿಮೆ ಅನ್ನಿಸುತ್ತೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಚಳುವಳಿಗಳ ಮೂಲಕ ಗುರುತಿಸಿಕೊಂಡಿದ್ದ ಜಿನಾಕು ಸಂಸ್ಮರಣೆಯಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರವಲ್ಲ ಅಭಿಮಾನದ ವಿಚಾರ. ನಾಡಿನ ನಾನಾ ಭಾಗದಿಂದ ಬಂದಿರುವ ಅವರ ಅಭಿಮಾನಿಗಳೇ ಇದಕ್ಕೆ ಸಾಕ್ಷಿ. ಜಿನಾಕು ಒಬ್ಬ ವ್ಯಕ್ತಿಯಾಗಿರದೆ, ವ್ಯಕ್ತಿಯ ಜತೆಗೆ ವಿಚಾರವಿತ್ತು. ಮುಂದಿನ ದಿನಗಳಲ್ಲೂ ಅವರ ವಿಚಾರ ಬದುಕಿರುತ್ತೆ ಎಂದು ಹೇಳಿದರು.

ನಗರದಲ್ಲಿ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿರುವುದರ ಬಗ್ಗೆ ತೀವ್ರ ಹೋರಾಟ ಮಾಡುವ ಮೂಲಕ ಜೀವನದ ಕೊನೆಯವರೆಗೂ ಕನ್ನಡದ ನಾಡು-ನುಡಿ, ನೆಲ-ಜಲ, ಕಲೆ-ಸಾಹಿತ್ಯದ ಉಳಿವಿಗಾಗಿ ಶ್ರಮಿಸಿದರು. ಅಲ್ಲದೆ, ಕಾರ್ಮಿಕ ಸಮಸ್ಯೆಗಳಿಗೆ ಸ್ಪಂದಿಸಿದರು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್, ಕನ್ನಡ ಚಳವಳಿ ಅಧ್ಯಕ್ಷ ಗುರುದೇವ್ ನಾರಾಯಣ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವ.ಚ.ಚನ್ನೇಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News