ತ್ರಿವಳಿ ತಲಾಕ್ ಸುಗ್ರೀವಾಜ್ಞೆ ಪ್ರಜಾತಂತ್ರ ವಿರೋಧಿ: ಡಾ.ಅಸ್ಮಾ ಝಾಹೆರಾ

Update: 2018-09-24 15:43 GMT

ಬೆಂಗಳೂರು, ಸೆ.24: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ತರಾತುರಿಯಲ್ಲಿ ತಂದಿರುವ ತ್ರಿವಳಿ ತಲಾಕ್ ಸುಗ್ರೀವಾಜ್ಞೆಯು, ಮುಸ್ಲಿಮರು, ಇಸ್ಲಾಮಿ ಶರೀಅತ್, ಪ್ರಜಾತಂತ್ರದ ವಿರುದ್ಧ ಜಾರಿಗೆ ತಂದಿರುವ ನೀತಿಯಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ವಿಭಾಗದ ಸಂಚಾಲಕಿ ಡಾ.ಅಸ್ಮಾ ಝಾಹೆರಾ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬೆನ್ಸನ್‌ಟೌನ್‌ನಲ್ಲಿರುವ ಪಾಲನ ಭವನದಲ್ಲಿ ಮಾತನಾಡಿದ ಅವರು, ಇದು ರಾಜಕೀಯ ದುರುದ್ದೇಶದಿಂದ ಕೂಡಿದ ಸುಗ್ರೀವಾಜ್ಞೆಯಾಗಿದೆ. ಪತಿ, ತನ್ನ ಪತ್ನಿಗೆ ಕೊಡುವ ತಲಾಕ್(ವಿಚ್ಛೇದನ)ಅನ್ನು ಬಿಜೆಪಿ ಸರಕಾರ ಅಪರಾಧವನ್ನಾಗಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

ಸರಕಾರವು ಮುಸ್ಲಿಮ್ ಸಮಾಜದ ಉಲೇಮಾಗಳು, ಧಾರ್ಮಿಕ ಮುಖಂಡರು, ಗಣ್ಯರ ಜೊತೆ ಮಾತುಕತೆ ನಡೆಸಿಲ್ಲ. ರಾಜ್ಯಸಭೆಯಲ್ಲಿಯೂ ತ್ರಿವಳಿ ತಲಾಕ್‌ಗೆ ಸಂಬಂಧಿಸಿದ ವಿಧೇಯಕಕ್ಕೆ ಒಪ್ಪಿಗೆ ಪಡೆಯುವಲ್ಲಿ ಸರಕಾರ ವಿಫಲವಾಗಿದೆ. ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ದಬ್ಬಾಳಿಕೆಯ ಮೂಲಕ ಮುಸ್ಲಿಮ್ ಸಮಾಜದ ಮೇಲೆ ಕಾನೂನು ಬಾಹಿರ ತೊಂದರೆಯನ್ನು ಉಂಟು ಮಾಡಿದೆ ಎಂದು ಅವರು ದೂರಿದರು.

ತ್ರಿವಳಿ ತಲಾಕ್ ವಿಧೇಯಕದ ಕರಡಿನಲ್ಲಿ ಹಲವಾರು ನ್ಯೂನತೆಗಳಿದ್ದು, ಅದನ್ನು ಸೆಲೆಕ್ಟ್ ಕಮಿಟಿಗೆ ಕಳುಹಿಸುವಂತೆ ಕೋರಲಾಗಿತ್ತು. ಆದರೆ, ಬಿಜೆಪಿ ಸರಕಾರ ಇದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಅಸ್ಮಾ ಝಾಹೆರಾ ಆರೋಪಿಸಿದರು.

ಮುಸ್ಲಿಮ್ ಸಮುದಾಯದ ಮಹಿಳೆಯರ ಹಿತಚಿಂತಕನಂತೆ ವರ್ತಿಸುತ್ತಿರುವ ಕೇಂದ್ರ ಸರಕಾರ, ಮನೆಯ ಯಜಮಾನ ಅಥವಾ ಕುಟುಂಬಕ್ಕೆ ಆಸರೆಯಾಗಿರುವ ವ್ಯಕ್ತಿ ಮೂರು ವರ್ಷದ ಜೈಲು ಶಿಕ್ಷೆಗೆ ಗುರಿಯಾದರೆ, ಅವರ ಇಡೀ ಸಂಸಾರ ನರಕವಾಗಬಹುದು. ಈ ಬಗ್ಗೆ ಯಾಕೆ ಸರಕಾರ ಚಿಂತಿಸುತ್ತಿಲ್ಲ ಎಂದು ಅವರು ಹೇಳಿದರು.

ತ್ರಿವಳಿ ತಲಾಕ್ ವಿಧೇಯಕದ ವಿರುದ್ಧ ಐದು ಕೋಟಿ ಮುಸ್ಲಿಮ್ ಸಮಾಜದ ಮಹಿಳೆಯರು ಕಾನೂನು ಆಯೋಗಕ್ಕೆ ಸಹಿ ಮಾಡಿ ಕಳುಹಿಸಿದ್ದರು. ಮತ್ತು 250ಕ್ಕೂ ಹೆಚ್ಚು ರ್ಯಾಲಿಗಳು ದೇಶಾದ್ಯಂತ ನಡೆಸಲಾಗಿತ್ತು. ಎರಡು ಕೋಟಿಗೂ ಹೆಚ್ಚು ಮಹಿಳೆಯರು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು ಎಂದು ಅಸ್ಮಾ ಝಾಹೆರಾ ತಿಳಿಸಿದರು.

ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ರಾಜ್ಯ ಸಂಚಾಲಕಿ ಡಾ.ಆಸಿಫಾ ನಿಸಾರ್ ಮಾತನಾಡಿ, ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಅಥವಾ ಶರೀಅತ್‌ನಲ್ಲಿ ಯಾರ ಹಸ್ತಕ್ಷೇಪವನ್ನು ಸಹಿಸಲು ಸಾಧ್ಯವಿಲ್ಲ. ಇದು ದೇಶದ ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಮೂಲಭೂತ ಹಕ್ಕಾಗಿದೆ ಎಂದರು.

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳು, ವರದಕ್ಷಿಣೆ ಕಿರುಕುಳದ ಬಗ್ಗೆ ಚಿಂತಿಸುವ ಬದಲು, ಅನಗತ್ಯವಾಗಿ ಮುಸ್ಲಿಮರ ವೈಯಕ್ತಿಕ ಕಾನೂನಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಚೆನ್ನೈನ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯೆ ಫಾತಿಮಾ ಮುಝಪ್ಫರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News