ಜಿಲ್ಲಾಧಿಕಾರಿಗಳಿಗೆ ಇರುವ ಅಧಿಕಾರವನ್ನು ವಿವರಿಸಿ: ವಕೀಲರಿಗೆ ಹೈಕೋರ್ಟ್ ಸೂಚನೆ

Update: 2018-09-24 16:43 GMT

ಬೆಂಗಳೂರು, ಸೆ.24: ರಾಜ್ಯದ ಮಲ್ಪಿಫ್ಲೆಕ್ಸ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ದುಬಾರಿ ಇರುವುದು ಹಾಗೂ ಹೊರಗಡೆಯಿಂದ ಆಹಾರ ಪದಾರ್ಥಗಳನ್ನು ತರಲು ಅವಕಾಶವಿಲ್ಲದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಇರುವ ಅಧಿಕಾರವನ್ನು ವಿವರಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

ನೆಲಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಮಲ್ಪಿಫ್ಲೆಕ್ಸ್‌ಗಳಿಗೆ ಜನರು ಸಿನಿಮಾ ನೋಡಲು ಹೋದರೆ ಅಲ್ಲಿಯ ಅಂಗಡಿಗಳಲ್ಲಿಯೆ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಬೇಕು. ಹಾಗೇನಾದರೂ ಹೊರಗಡೆಯಿಂದ ಆಹಾರ ಪದಾರ್ಥಗಳನ್ನು ತಂದರೆ ಅವಕಾಶ ನೀಡುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ರಾಜ್ಯದ ಎಲ್ಲ ಮಲ್ಪಿಫ್ಲೆಕ್ಸ್‌ಗಳೂ ಕರ್ನಾಟಕ ಸಿನಿಮಾ(ರೆಗ್ಯೂಲೇಷನ್) ಆಕ್ಟ್ 2014 ಹಾಗೂ ನಿಯಮ 14 ಮತ್ತು 21ನ್ನು ಉಲ್ಲಂಘಿಸಿ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿವೆ. ಹೀಗಾಗಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ಮಲ್ಪಿಫ್ಲೆಕ್ಸ್ ಮಾಲಕರೊಂದಿಗೆ ಚರ್ಚಿಸಿ ಆಹಾರ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡಲು ಹಾಗೂ ಹೊರಗಡೆಯಿಂದ ತರುವ ಆಹಾರಕ್ಕೂ ಅವಕಾಶ ನೀಡಲು ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಇರುವ ಅಧಿಕಾರವನ್ನು ವಿವರಿಸುವಂತೆ ಸೂಚಿಸಿ ಅರ್ಜಿ ವಿಚಾರಣೆುನ್ನು ಅ.10ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News