ಸಿವಿಲ್ ವ್ಯಾಜ್ಯ ವಿಚಾರ: ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಕ್ಕೆ ವಿವರಣೆ ನೀಡಲು ಸೂಚಿಸಿದ ಹೈಕೋರ್ಟ್

Update: 2018-09-24 16:45 GMT

ಬೆಂಗಳೂರು, ಸೆ.24: ಬೆದರಿಕೆ ಹಾಕಿದರೆ ಯಾರಾದರೂ 30 ಪುಟಗಳ ದೂರು ನೀಡುತ್ತಾರಾ ಎಂದು ಪ್ರಶ್ನಿಸಿರುವ ಹೈಕೋರ್ಟ್ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಕ್ಕೆ ವಿವರಣೆ ನೀಡುವಂತೆ ನಗರ ಪೊಲೀಸರಿಗೆ ಸೂಚಿಸಿದೆ.

ಬಸವನಗುಡಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ನಗರದ ಡಿ. ವೆಂಕಟೇಶ್ ಗುಪ್ತಾ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳು ಕೇಸ್ ದಾಖಲಿಸಿರುವ ಕುರಿತು ಸಮರ್ಥಿಸಿಕೊಳ್ಳಲು ಮುಂದಾದರು. ಮಧ್ಯಪ್ರವೇಶಿಸಿದ ಪೀಠ, ಪ್ರಕರಣ ಮೇಲ್ನೋಟಕ್ಕೆ ಸಂಪೂರ್ಣ ಸಿವಿಲ್ ಕೇಸ್‌ನಂತೆ ಕಾಣುತ್ತಿದೆ. ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ಮಧ್ಯ ಪ್ರವೇಶ ಸರಿಯಲ್ಲ. ಪ್ರಕರಣದಲ್ಲಿ ಒಂದೇ ಒಂದು ಅಪರಾಧಿಕ ಅಂಶವಿದ್ದರೂ ನೀವು ದೂರು ದಾಖಲಿಸುವ ವಿಚಾರದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ. ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸುವುದೇಕೆ. ಬೆದರಿಕೆ ಹಾಕಿದ್ದು ನಿಜವಾಗಿದ್ದರೆ ಬೆದರಿಕೆಗೆ ಒಳಗಾದವರು ಒಂದೆರಡು ಪುಟದ ದೂರು ಕೊಟ್ಟರೆ ಸಾಕಲ್ಲವೇ. ಬೆದರಿಕೆ ಹಾಕಿದರೆ ಯಾರಾದರೂ ಮೂವತ್ತು ಪುಟಗಳ ದೂರು ಕೊಡುತ್ತಾರಾ? ಎಂದು ಪೀಠ ಪೊಲೀಸರ ವಿರುದ್ಧ ಅಸಮಧಾನ ವ್ಯಕ್ತಪಡಿಸಿತು.

ಇದಕ್ಕೆ ವಿವರಣೆ ನೀಡಿದ ಸರಕಾರಿ ಅಭಿಯೋಜಕರು, ಪ್ರಕರಣದಲ್ಲಿ ವಂಚನೆ ಹಾಗೂ ಬೆದರಿಕೆ ಅಂಶಗಳಿವೆ. ಹೀಗಾಗಿಯೇ ಅಷ್ಟು ವಿವರವಾದ ದೂರು ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದರು. ನೀವು ಮಾಡಿರುವುದು ಸರಿ ಎಂದು ವಾದಿಸುವುದಾದರೆ ಅದನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ. ಅದೇ ರೀತಿ ಸುಪ್ರೀಂ ಕೋರ್ಟ್ ನಿರ್ದೇಶನಗಳು ಇದ್ದರೆ ಅವನ್ನು ಒದಗಿಸಿಕೊಡಿ ಎಂದು ಸೂಚನೆ ನೀಡಿದ ಪೀಠ, ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿತು.

ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲು ಬಸವನಗುಡಿ ಠಾಣಾ ಪೊಲೀಸರಿಗೆ ಷರಾ ಬರೆದಿದ್ದ ಕುರಿತು ವಿವರಣೆ ನೀಡಲು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶರಣಪ್ಪ ವಿಚಾರಣೆಗೆ ಹಾಜರಾಗಿದ್ದರು. ಹಿಂದಿನ ವಿಚಾರಣೆ ವೇಳೆ ವಿವರಣೆ ನೀಡಲು ಖುದ್ದು ಹಾಜರಾಗುವಂತೆ ಡಿಸಿಪಿಗೆ ನ್ಯಾಯಪೀಠ ನಿರ್ದೇಶಿಸಿತ್ತು.

ಪ್ರಕರಣದ ಹಿನ್ನೆಲೆ: ಶ್ರೀಕಾಂತ್ ಎಂಬುವರು ಮತ್ತು ಅರ್ಜಿದಾರರಾದ ವೆಂಕಟೇಶ್ ಗುಪ್ತಾ ಮತ್ತವರ ಪುತ್ರ ಶ್ರೀಹರಿ ಸಂಬಂಧಿಕರಾಗಿದ್ದಾರೆ. ಇವರುಗಳು ಒಂದೇ ಕಂಪೆನಿಯಲ್ಲಿ ಷೇರು ಹೂಡಿದ್ದು, ನಂತರದ ದಿನಗಳಲ್ಲಿ ಷೇರು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ವಿಚಾರದಲ್ಲಿ ಡಿಸಿಪಿಗೆ ದೂರು ಸಲ್ಲಿಸಿದ ಶ್ರೀಕಾಂತ್, ವೆಂಕಟೇಶ್ ಗುಪ್ತ ಮತ್ತವರ ಪುತ್ರ ಶ್ರೀಹರಿ ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದರು. ಪ್ರಕರಣ ಸಂಬಂಧ ಕಾನೂನು ಕ್ರಮ ಜರುಗಿಸಲು ಡಿಸಿಪಿ ಹೇಳಿದ್ದರು. ಇನ್ನು ಬಸವನಗುಡಿ ಠಾಣಾ ಇನ್ಸ್‌ಪೆಕ್ಟರ್ ಎಫ್‌ಐಆರ್ ದಾಖಲಿಸಿ, ಗುಪ್ತಾರನ್ನು ಬಂಧಿಸಿದ್ದರು. ಈ ಪ್ರಕರಣ ರದ್ದು ಕೋರಿ ಗುಪ್ತಾ ಹಾಗೂ ಶ್ರೀಹರಿ ಹೈಕೋರ್ಟ್‌ಗೆ ಕ್ರಿಮಿನಲ್ ಮನವಿ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News