ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರ: ಸಮಿತಿ ರಚಿಸಿ, ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2018-09-24 16:50 GMT

ಬೆಂಗಳೂರು, ಸೆ.24: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಮುಚ್ಚಿರುವ ಗುಂಡಿಗಳ ಗುಣಮಟ್ಟ ಪರೀಕ್ಷಿಸಲು ಭಾರತೀಯ ಸೇನಾ ಎಂಜಿನಿಯರ್ ಒಳಗೊಂಡ ಸಮಿತಿ ರಚಿಸಿ, ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ.

ವಿಜಯನ್ ಮೆನನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠ, ನಗರದಲ್ಲಿ ಗುಂಡಿಗಳನ್ನು ಮುಚ್ಚಿದರೆ ಸಾಲದು, ಗುಣಮಟ್ಟ ಹೇಗಿದೆ, ಎಷ್ಟು ವಾರ್ಡ್‌ಗಳಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಪಾಲಿಕೆ ವಕೀಲರು, ಪಶ್ಚಿಮ ವಲಯದ ಮಲ್ಲೇಶ್ವರದ ಏಳು, ಮಹಾಲಕ್ಷ್ಮೀ ಬಡಾವಣೆಯ ಏಳು, ಯಲಹಂಕದ ನಾಲ್ಕು ವಾರ್ಡ್‌ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದರು.

ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು ಪಾಲಿಕೆ ಕಾಮಗಾರಿ ಪರಿಶೀಲನೆಗೆ ಆಯೋಗ ನೇಮಕ ಮಾಡಿ, ಆಯೋಗದ ಕೆಲಸಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಆಯುಕ್ತರಿಗೆ ತಿಳಿಸಿದರು. ಮುಂದಿನ ವಾರದೊಳಗೆ ಸಂಪೂರ್ಣವಾಗಿ ನಗರ ರಸ್ತೆಗುಂಡಿಗಳಿಂದ ಮುಕ್ತವಾಗಿರಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಸೆ. 25ಕ್ಕೆ ಮುಂದೂಡಿದರು.

ಬಿಬಿಎಂಪಿ ಇಂಜಿನಿಯರ್, ಕೆಂಪೇಗೌಡ ವಾರ್ಡ್‌ನಲ್ಲಿ 8 ಹಳೆಯ 26 ಹೊಸ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಆಯೋಗಕ್ಕೆ ಮಾಹಿತಿ ನೀಡಿದರು. ಯಾವ ಮಾನದಂಡದಲ್ಲಿ ಗುಂಡಿಗಳನ್ನು ಮುಚ್ಚಿದ್ದೀರಿ? ಎಷ್ಟು ಇಂಚು ಡಾಂಬರ್ ಹಾಕಲಾಗಿದೆ? ಗುತ್ತಿಗೆಯ ಕಾಪಿ ಮತ್ತು ನೀವು ಅನುಸರಿಸಿದ ಮಾನದಂಡದ ಕಾಪಿ ಎಲ್ಲಿವೆ? ಎಂದು ನ್ಯಾಯಪೀಠವು ಪ್ರಶ್ನಿಸಿತು. ಅಲ್ಲದೆ, ಯಲಹಂಕದಲ್ಲಿ ಶೇ.100ರಷ್ಟು ಗುಂಡಿಗಳನ್ನು ಮುಚ್ಚಿದ್ದೀರಿ ಎಂದು ಹೇಳುತ್ತೀರಾ. ನೀವೇಕೆ ಸುಳ್ಳು ಮಾಹಿತಿ ನೀಡುತ್ತೀರಿ ಎಂದು ಇಂಜಿನಿಯರ್‌ಗಳಿಗೆ ಪ್ರಶ್ನಿಸಿದರು. ಪಾಲಿಕೆ ಮುಚ್ಚಿದ ಗುಂಡಿಗಳ ಬಗ್ಗೆ ಪರಿಶೀಲನೆ ನಡೆಸಿ ಸೆ.25ರಂದೆ ಪ್ರಾಥಮಿಕ ವರದಿ ಸಲ್ಲಿಸಲು ನ್ಯಾಯಪೀಠವು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News