ವನಿತೆಯರ ಕ್ರಿಕೆಟ್: ಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ

Update: 2018-09-24 18:56 GMT

ಕೊಲಂಬೊ, ಸೆ.25: ಅನುಜಾ ಪಾಟೀಲ್ ಮತ್ತು ಜೆಮಿಮಾ ರೋಡ್ರಿಗಸ್ ಅರ್ಧಶತಕಗಳ ನೆರವಿನಲ್ಲಿ ಭಾರತದ ಮಹಿಳೆಯರ ತಂಡ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯ ನಾಲ್ಕನೇ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಗಳಿಸಿದೆ.

 ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಸೋಮವಾರ ನಡೆದ ಮಳೆಬಾಧಿತ ಪಂದ್ಯದಲ್ಲಿ ಶ್ರೀಲಂಕಾ ತಂಡ 17 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 134 ರನ್ ಗಳಿಸಿತ್ತು. ಅನುಜಾ ಪಾಟೀಲ್ (36ಕ್ಕೆ 3) ಲಂಕಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಲಂಕಾದ ಶಶಿಕಲಾ 32 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

 ಗೆಲುವಿಗೆ 135ರನ್ ಗಳಿಸಬೇಕಿದ್ದ ಭಾರತ 15.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತು. ಪಾಟೀಲ್ 42 ಎಸೆತಗಳಲ್ಲಿ 54 ರನ್ ಮತ್ತು ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ 52 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

18ರ ಹರೆಯದ ಜೆಮಿಮಾ ರೊಡ್ರಿಗಸ್ ಸತತ ಎರಡನೇ ಅರ್ಧಶತಕ ದಾಖಲಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರು 40ಎಸೆತಗಳಲ್ಲಿ 57 ರನ್ ಗಳಿಸಿದ್ದರು.

ಭಾರತ 4 ಓವರ್‌ಗಳಲ್ಲಿ 41 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಜೆಮಿಮಾ ಮತ್ತು ಪಾಟೀಲ್ ಕ್ರೀಸ್‌ನಲ್ಲಿ ಜೊತೆಯಾಗಿ 70 ಎಸೆತಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿದರು. ರೊಡ್ರಿಗಸ್ 5 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ರಾಡ್ರಿಗಸ್ 7 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.

 ಭಾರತ 7 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 56 ರನ್ ಗಳಿಸಿತ್ತು. ಕೊನೆಯ 10 ಓವರ್‌ಗಳಲ್ಲಿ 79 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಜೆಮಿಮಾ ಮತ್ತು ಪಾಟೀಲ್ ಜೊತೆಯಾಗಿ 81 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News