ಸೂಪರ್-4: ಇಂದು ಭಾರತ ಅಫ್ಘಾನಿಸ್ತಾನ ಮುಖಾಮುಖಿ

Update: 2018-09-24 18:58 GMT

ದುಬೈ, ಸೆ.24: ಭಾರತ ತಂಡ ಮಂಗಳವಾರ ತನ್ನ ಕೊನೆಯ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾ ಫೈನಲ್ ಪಂದ್ಯಕ್ಕಿಂತ ಮೊದಲು ಅಫ್ಘಾನ್ ವಿರುದ್ಧ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ದಾಂಡಿಗರನ್ನು ಪರೀಕ್ಷೆಗೆ ಒಳಗಪಡಿಸುವ ವಿಶ್ವಾಸದಲ್ಲಿದೆ. ಮಧ್ಯಮ ಕ್ರಮಾಂಕದ ಆಟಗಾರರು ಈ ತನಕ ಟೂರ್ನಿಯಲ್ಲಿ ಹೆಚ್ಚು ಆಡುವ ಅವಕಾಶ ಪಡೆದಿಲ್ಲ.

ಹಾಂಕಾಂಗ್ ವಿರುದ್ಧ ಗೆಲುವು ಸಾಧಿಸಿ ಏಶ್ಯಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಿದ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ್ಧ ಆಡಿದ್ದ ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಬಾಂಗ್ಲಾ ವಿರುದ್ಧದ ಸೂಪರ್-4 ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತ್ತು.

ಎರಡು ಸೂಪರ್-4 ಪಂದ್ಯಗಳನ್ನು ಜಯಿಸಿರುವ ಭಾರತ ಸೆ.28 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ ಅವರು ಮಧ್ಯಮ ಕ್ರಮಾಂಕದ ಆಟಗಾರರು ಅಫ್ಘಾನ್‌ನ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ದಾಳಿಯನ್ನು ಎದುರಿಸುವ ಅವಕಾಶ ಪಡೆಯಬೇಕೆಂಬ ಬಯಕೆಯಲ್ಲಿದ್ದಾರೆ. ಶಿಖರ್ ಧವನ್(327) ಹಾಗೂ ರೋಹಿತ್(269)ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಅಗ್ರ ಕ್ರಮಾಂಕದಲ್ಲಿ ರನ್ ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ದಾಂಡಿಗರಿಗೆ ತಂಡದ ಗೆಲುವಿಗೆ ಕಾಣಿಕೆ ನೀಡುವ ಅಗತ್ಯಗೆ ಉದ್ಭವಿಸಿಲ್ಲ. ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಅಂಬಟಿ ರಾಯುಡು ಒಟ್ಟು 116 ರನ್ ಗಳಿಸಿದ್ದಾರೆ.

ಎಂಎಸ್ ಧೋನಿ, ಕೇದಾರ್ ಜಾಧವ್ ಹಾಗೂ ದಿನೇಶ್ ಕಾರ್ತಿಕ್‌ಗೆ ಈವರೆಗೆ ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿಲ್ಲ. ರೋಹಿತ್ ಹಾಗೂ ಧವನ್ ಈವರೆಗೆ ಕ್ರಮವಾಗಿ 284 ಹಾಗೂ 321 ಎಸೆತಗಳನ್ನು ಎದುರಿಸಿದರೆ , ರಾಯುಡು 162 ಎಸೆತ ಎದುರಿಸಿದ್ದಾರೆ. ಕಾರ್ತಿಕ್(78 ಎಸೆತ), ಧೋನಿ(40 ಎಸೆತ) ಹಾಗೂ ಕೇದಾರ್(27 ಎಸೆತ)ಕೆಲವೇ ಎಸೆತ ಆಡಲು ಸಾಧ್ಯವಾಗಿದೆ.

ರೋಹಿತ್ ಅವರು ಧೋನಿಗೆ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಭಡ್ತಿ ನೀಡಿದ್ದರು. ಆದರೆ, ಅವರು 33 ರನ್ ಗಳಿಸಿ ಔಟಾಗಿದ್ದರು.

ದುಬೈನ ಇಂಟರ್‌ನ್ಯಾಶನಲ್ ಸ್ಟೇಡಿಯಂ ಪಿಚ್‌ನಲ್ಲಿ ಭಾರತದ ಬೌಲರ್‌ಗಳು ಯಶಸ್ವಿ ಪ್ರದರ್ಶನ ನೀಡುತ್ತಿದ್ದು ಪ್ರತಿ ಓವರ್‌ಗೆ 5ಕ್ಕಿಂತ ಕಡಿಮೆ ರನ್ ನೀಡುತ್ತಿದ್ದಾರೆ.ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್‌ದೀಪ್ ಯಾದವ್ ತಲಾ 5 ವಿಕೆಟ್‌ಗಳನ್ನು ಕಬಳಿಸಿದ್ದರೆ, ಜಸ್‌ಪ್ರಿತ್ ಬುಮ್ರಾ 3.37 ಇಕಾನಮಿ ರೇಟ್‌ನಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಭುವನೇಶ್ವರ ಕುಮಾರ್(6 ವಿಕೆಟ್)ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಮತ್ತೊಂದೆಡೆ, ಅಫ್ಘಾನಿಸ್ತಾನ ಟೂರ್ನಿಯಲ್ಲಿ ಈತನಕ ಎಲ್ಲ ತಂಡಗಳಿಗೂ ತೀವ್ರ ಸ್ಪರ್ಧೆಯೊಡ್ಡಿದೆ. ಗ್ರೂಪ್ ಹಂತದಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೂರ್ನಿಯಿಂದ ಹೊರನಡೆಯುವಂತೆ ಮಾಡಿದ್ದ ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಸೂಪರ್-4 ಪಂದ್ಯಗಳಲ್ಲಿ ಅನುಭವದ ಕೊರತೆಯಿಂದಾಗಿ ಪಂದ್ಯ ಕೈಚೆಲ್ಲಿತ್ತು.

► ಪಂದ್ಯ ಆರಂಭದ ಸಮಯ: ಸಂಜೆ 5:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News