ಶ್ರೀಲಂಕಾ ನಾಯಕತ್ವದಿಂದ ಮ್ಯಾಥ್ಯೂಸ್ ಉಚ್ಚಾಟನೆ: ನಾಯಕನಾಗಿ ದಿನೇಶ್ ಚಾಂಡಿಮಾಲ್ ನೇಮಕ

Update: 2018-09-24 19:04 GMT

ಕೊಲಂಬೊ, ಸೆ.24: ಯುಎಇನಲ್ಲಿ ನಡೆಯುತ್ತಿರುವ ಏಶ್ಯಕಪ್‌ನಲ್ಲಿ ಶ್ರೀಲಂಕಾ ತಂಡ ಬೇಗನೆ ನಿರ್ಗಮಿಸಿದ ಹಿನ್ನೆಲೆಯಲ್ಲಿ ಆ್ಯಂಜೆಲೊ ಮ್ಯಾಥ್ಯೂಸ್‌ರನ್ನು ನಾಯಕನ ಸ್ಥಾನದಿಂದ ಉಚ್ಚಾಟಿಸಲಾಗಿದೆ. ಮ್ಯಾಥ್ಯೂಸ್‌ರಿಂದ ತೆರವಾದ ಸ್ಥಾನಕ್ಕೆ ವಿಕೆಟ್‌ಕೀಪರ್-ದಾಂಡಿಗ ದಿನೇಶ್ ಚಾಂಡಿಮಾಲ್‌ರನ್ನು ಎಲ್ಲ ಮೂರು ಮಾದರಿಯ ಕ್ರಿಕೆಟ್‌ಗೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

31ರ ಹರೆಯದ ಮ್ಯಾಥ್ಯೂಸ್‌ರನ್ನು ಜನವರಿಯಲ್ಲಿ ಶ್ರೀಲಂಕಾದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕನ್ನಾಗಿ ಮರು ಆಯ್ಕೆ ಮಾಡಲಾಗಿತ್ತು. ಆದರೆ, ಮ್ಯಾಥ್ಯೂಸ್ ನಾಯಕತ್ವದಲ್ಲಿ ಶ್ರೀಲಂಕಾದ ಅದೃಷ್ಟ ಬದಲಾಗಲಿಲ್ಲ. ಪ್ರಸ್ತುತ ನಡೆಯುತ್ತಿರುವ ಏಶ್ಯಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲೇ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ಸೋಲುಂಡಿತ್ತು.

 ‘‘ಮುಂಬರುವ ಇಂಗ್ಲೆಂಡ್ ವಿರುದ್ಧ ಸರಣಿ ಯಲ್ಲಿ ದಿನೇಶ್ ಚಾಂಡಿಮಾಲ್‌ರನ್ನು ಶ್ರೀಲಂಕಾದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ನೇಮಿಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ತಕ್ಷಣವೇ ಏಕದಿನ ಹಾಗೂ ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸುವಂತೆ ಆ್ಯಂಜೆಲೊ ಮ್ಯಾಥ್ಯೂಸ್‌ಗೆ ಸೂಚನೆ ನೀಡಲಾಗಿದೆ’’ಶ್ರೀಲಂಕಾ ಕ್ರಿಕೆಟ್ ಮಂಡಳಿ ಪತ್ರಿಕಾಪ್ರಕಟನೆಯೊಂದರಲ್ಲಿ ತಿಳಿಸಿದೆ.

ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಕಳೆದ 18 ತಿಂಗಳುಗಳಿಂದ ನಾಯಕತ್ವದ ಬಿಕ್ಕಟ್ಟು ತಲೆತೋರಿದ್ದು ಈ ಅವಧಿಯಲ್ಲಿ ಉಪುಲ್ ತರಂಗ, ಲಸಿತ್ ಮಾಲಿಂಗ, ಚಾಮರಾ ಕಪುಗಡೆರ ಹಾಗೂ ತಿಸಾರ ಪೆರೇರ ಏಕದಿನ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

 ಅಕ್ಟೋಬರ್ 10ರಿಂದ ಶ್ರೀಲಂಕಾ ತಂಡ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿ ಹಾಗೂ ಏಕೈಕ ಟ್ವೆಂಟಿ-20 ಹಾಗೂ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

► ನನ್ನನ್ನು ಬಲಿಪಶು ಮಾಡಲಾಗಿದೆ: ಮ್ಯಾಥ್ಯೂಸ್

ಏಶ್ಯಕಪ್‌ನಲ್ಲಿ ತಂಡದ ಹೀನಾಯ ಪ್ರದರ್ಶನಕ್ಕೆ ತನ್ನನ್ನು ಮಾತ್ರ ಹೊಣೆಗಾರನ್ನಾಗಿ ಮಾಡಲಾಗಿದೆ ಎಂದು ಶ್ರೀಲಂಕಾದ ಉಚ್ಚಾಟಿತ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾದ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ತಂಡಗಳ ನಾಯಕತ್ವವನ್ನು ತ್ಯಜಿಸುವಂತೆ ಕ್ರಿಕೆಟ್ ಮಂಡಳಿಯು ರವಿವಾರ ತಾಕೀತುಮಾಡಿರುವ ಕಾರಣ ಬೇಸರಗೊಂಡಿರುವ 31ರ ಹರೆಯದ ಮ್ಯಾಥ್ಯೂಸ್ ಏಕದಿನ ಹಾಗೂ ಟ್ವೆಂಟಿ-20 ಸರಣಿಯಿಂದ ನಿವೃತ್ತಿಯಾಗುವ ಬೆದರಿಕೆ ಹಾಕಿದ್ದಾರೆ.

‘‘ಏಶ್ಯಕಪ್‌ನಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ವಿಷಯದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ’’ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬರೆದಿರುವ ಪತ್ರದಲ್ಲಿ ಮ್ಯಾಥ್ಯೂಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News