ದಿಲ್ಲಿಗರ ದಾಹ ತಣಿಸಲು ಲಂಡನ್‌ನಿಂದ ಬಂದ ‘ಮಟಕಾ ಮ್ಯಾನ್’

Update: 2018-09-25 10:54 GMT

ಬೇಸಿಗೆಯಲ್ಲಿ ದಿಲ್ಲಿಯ ಸುಡುಬಿಸಿಲಿನಲ್ಲಿ ಓಡಾಡುತ್ತಿರುವವರು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಎಲ್ಲಿಯಾದರೂ ಒಂದು ಗ್ಲಾಸ್ ತಂಪಾದ ನೀರು ಕುಡಿಯಲು ಸಿಕ್ಕರೆ ಸಾಕು ಎಂದು ಹಪಹಪಿಸುತ್ತಿರುತ್ತಾರೆ.

ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ನೌಕರಿಗಳಲ್ಲಿರುವವರು,ರಿಕ್ಷಾ ಎಳೆಯುವವರು,ಬೀದಿ ವ್ಯಾಪಾರಿಗಳು ಮತ್ತು ಬಿಸಿಲಿನಲ್ಲಿಯೂ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರಂತಹ ಲಕ್ಷಾಂತರ ಜನರಿಗೆ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಆಗಾಗ್ಗೆ ನೀರಿನ ಬಾಟ್ಲಿಗಳನ್ನು ಖರೀದಿಸಲು ಸಾಧ್ಯವಿಲ್ಲ. ಇಂತಹವರ ನೆರವಿಗಾಗಿಯೇ ನಗರದ ವಿವಿಧ ಭಾಗಗಳಲ್ಲಿ ತಂಪುನೀರಿನಿಂದ ತುಂಬಿರುವ ‘ಮಟ್ಕಾಗಳು’ ಅಥವಾ ಮಣ್ಣಿನ ಮಡಕೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ ಈ ಮಡಕೆಗಳು ತಂಪುನೀರಿನಿಂದ ತುಂಬಲ್ಪಟ್ಟಿರುತ್ತವೆ. ಹೆಚ್ಚಿನವರಿಗೆ ಹೀಗೆ ನೀರು ತುಂಬುತ್ತಿರುವವರು ಯಾರು ಎನ್ನವುದೂ ಗೊತ್ತಿಲ್ಲ ಮತ್ತು ಅವರಿಗೆ ಇದು ಒಂದು ಜಾದೂ ಎಂಬಂತೆ ಕಂಡುಬರುತ್ತಿದೆ.

ಈ ಎಲ್ಲ ತಂಪುನೀರಿನ ಮಡಕೆಗಳ ಹಿಂದಿರುವುದು 69ರ ಹರೆಯದ ಅಳಗನಾಥಂ ನಟರಾಜನ್. ಪ್ರತಿದಿನ ನಸುಕು ಹರಿಯುವ ಮುನ್ನವೇ ಎದ್ದೇಳುವ ಅವರು ಬಡಜನರ ದಾಹವನ್ನು ತಣಿಸಲು ನಗರದ ವಿವಿಧೆಡೆಗಳಲ್ಲಿ ತಾನಿರಿಸಿರುವ 70 ಮಡಕೆಗಳಿಗೆ ನೀರು ತುಂಬಿಸಲು ಮನೆಯಿಂದ ಹೊರಬೀಳುತ್ತಾರೆ. ಅಂದ ಹಾಗೆ ರೆಫ್ರಿಜರೇಟರ್‌ಗಳು ಮತ್ತು ಕೂಲರ್‌ಗಳು ಬರುವ ಮುನ್ನ ಮನೆಗಳಲ್ಲಿ ನೀರನ್ನು ತಂಪಾಗಿಸಲು ಇವೇ ಸಾಂಪ್ರದಾಯಿಕ ಮಣ್ಣಿನ ಪಾತ್ರೆಗಳನ್ನು ಬಳಸಲಾಗುತ್ತಿತ್ತು ಎನ್ನುವುದು ಇತ್ತೀಚಿನ ತಲೆಮಾರುಗಳಿಗೆ ತಿಳಿದಂತಿಲ್ಲ.

ಕ್ಯಾನ್ಸರ್‌ನ ವಿರುದ್ಧ ಹೋರಾಡಿ ಗೆದ್ದಿರುವ ಮತ್ತು ಲಂಡನ್‌ನ ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿಯ ತನ್ನ ಅಂಗಡಿ ವ್ಯವಹಾರವನ್ನು ತೊರೆದುಬಂದಿರುವ ನಟರಾಜನ್ ಅಂತಿಮವಾಗಿ ತನ್ನ ಈ ದಿನಚರಿಯಲ್ಲಿ ಜೀವನದ ಸುಖಸಂತೋಷವನ್ನು ಕಂಡುಕೊಂಡಿದ್ದಾರೆ.

ದಿಲ್ಲಿಯ ‘ಮಟಕಾ ಮ್ಯಾನ್’ ಎಂದೇ ಜನಪ್ರಿಯರಾಗಿರುವ ನಟರಾಜನ್ ಅವರ ಈ ಸೇವಾಕಾರ್ಯ ಆರಂಭಗೊಂಡಿದ್ದು 2014ರಲ್ಲಿ. ರಾಷ್ಟ್ರ ರಾಜಧಾನಿಯಲ್ಲಿಯೂ ಕುಡಿಯುವ ನೀರಿನಂತಹ ಮೂಲಸೌಕರ್ಯ ಎಲ್ಲರಿಗೂ ದೊರೆಯುವುದಿಲ್ಲ ಎನ್ನುವುದರ ಅರಿವಾದಾಗ ಅವರು ದಾರಿಹೋಕರ ಬಾಯಾರಿಕೆಯನ್ನು ತಣಿಸಲೆಂದು ತನ್ನ ಮನೆಯ ಹೊರಗೆ ಕೂಲರ್‌ನ್ನು ಇರಿಸಿದ್ದರು.

ಅದೊಂದು ದಿನ ಸಮೀಪದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ನೀರನ್ನೊಯ್ಯಲು ಕೂಲರ್ ಬಳಿ ಬಂದಿದ್ದ. ವಿಚಾರಿಸಿದಾಗ ಆತ ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರನ್ನು ಒದಗಿಸಲಾಗುತ್ತಿಲ್ಲ ಎನ್ನುವುದು ತಿಳಿದುಬಂದಿತ್ತು.

ಇದು ನಟರಾಜನ್‌ಗೆ ಆಘಾತವನ್ನುಂಟು ಮಾಡಿತ್ತು ಮತ್ತು ಈ ಬಗ್ಗೆ ತಾನೇನಾದರೂ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬರಲು ಅವರನ್ನು ಪ್ರಚೋದಿಸಿತ್ತು. ದಿಲ್ಲಿಯ ವಿವಿಧ ಕಡೆಗಳಲ್ಲಿ ಜನರ ಬಾಯಾರಿಕೆಯನ್ನು ನೀಗಿಸಲು ತಂಪುನೀರಿನ ಮಡಕೆಗಳನ್ನಿರಿಸಲು ಅವರು ನಿರ್ಧಾರ ಮಾಡಿದ್ದೇ ಆಗ.

ವರ್ಷದ 365 ದಿನವೂ ನಸುಕಿನಲ್ಲಿಯೇ ಎದ್ದು ಈ ಮಡಕೆಗಳಲ್ಲಿ ತಂಪುನೀರನ್ನು ತುಂಬಿಸುವ ಕಾಯಕವನ್ನು ನಟರಾಜನ್ ಒಂದು ವ್ರತದಂತೆ ನಿರ್ವಹಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಅವರನ್ನು ನೀರು ತುಂಬಿಸಲು ದಿಲ್ಲಿ ಸರಕಾರವು ನೇಮಿಸಿದ್ದ ವ್ಯಕ್ತಿ ಎಂದೇ ಜನರು ಭಾವಿಸಿದ್ದರು.

ನಟರಾಜನ್ ಬೆನ್ನ ಹಿಂದೆ ಯಾವುದೇ ಎನ್‌ಜಿಒ ಇಲ್ಲ ಅಥವಾ ಅವರು ಸರಕಾರಿ ಪ್ರಾಯೋಜಿತ ಸಂಸ್ಥೆಯೂ ಅಲ್ಲ. ತನ್ನ ಮಾನವೀಯ ಕಾರ್ಯಕ್ಕಾಗಿ ಅವರು ತನ್ನ ಜೀವಿತಾವಧಿಯ ಉಳಿತಾಯವನ್ನೇ ವ್ಯಯಿಸುತ್ತಿದ್ದಾರೆ. ಕೆಲವರು ಅವರ ಈ ನಿಸ್ವಾರ್ಥ ಕಾರ್ಯಕ್ಕೆ ತಮ್ಮ ದೇಣಿಗೆಗಳನ್ನೂ ನೀಡುತ್ತಾರೆ. ಆದರೆ ಮುಖ್ಯವಾಗಿ ತನ್ನ ಕುಟುಂಬದಿಂದ ಬಹಳಷ್ಟು ನೆರವು ಮತ್ತು ಬೆಂಬಲ ತನಗೆ ದೊರೆಯುತ್ತಿದೆ ಎನ್ನುತ್ತಾರೆ ನಟರಾಜನ್.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟರಾಜನ್ ಯುವಕನಾಗಿದ್ದಾಗಲೇ ಲಂಡನ್‌ಗೆ ತೆರಳಿದ್ದರು ಮತ್ತು 40ವರ್ಷಗಳ ಕಾಲ ಅಲ್ಲಿ ಉದ್ಯಮಿಯಾಗಿದ್ದರು. ಅಲ್ಲಿ ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಗುಣಮುಖರಾದ ಬಳಿಕ ಭಾರತಕ್ಕೆ ಮರಳಿ ದುರ್ಬಲ ವರ್ಗಗಳಿಗಾಗಿ ಏನನ್ನಾದರೂ ಮಾಡಲು ನಿರ್ಧರಿಸಿದ್ದರು.

ಭಾರತಕ್ಕೆ ಮರಳಿದ ಬಳಿಕ ದಿಲ್ಲಿಯಲ್ಲಿ ಅಂತಿಮ ಹಂತದ ಕ್ಯಾನ್ಸರ್ ರೋಗಿಗಳಿಗಾಗಿರುವ ಅನಾಥಾಶ್ರಮವೊಂದರಲ್ಲಿ ಸ್ವಯಂಸೇವಕನಾಗಿ ದುಡಿದಿದ್ದರು. ಚಾಂದ್ನಿ ಚೌಕ್‌ನಲ್ಲಿ ರಾತ್ರಿ ವೇಳೆ ನಿರಾಶ್ರಿತರಿಗೆ ಊಟವನ್ನು ಹಂಚುತ್ತಿದ್ದರು,ಇಷ್ಟೇ ಅಲ್ಲ...ಅನಾಥ ಶವಗಳಿಗೆ ಘನತೆಯ ಮುಕ್ತಿ ನೀಡಲು ಅವುಗಳ ಅಂತ್ಯಸಂಸ್ಕಾರವನ್ನೂ ನಡೆಸುತ್ತಿದ್ದರು.

 ನಟರಾಜನ್ ಬಡವರಿಗೆ ತಂಪುನೀರೊಂದನ್ನೇ ಒದಗಿಸುತ್ತಿಲ್ಲ, ಅವರಿಗೆ ಊಟ ಮತ್ತು ಹಣ್ಣುಗಳನ್ನೂ ನೀಡುತ್ತಾರೆ.

ನೀರಿನ ವಿತರಣೆಗಾಗಿ ಅವರು ತನ್ನ ವ್ಯಾನಿನಲ್ಲಿ 800 ಲೀ.ಸಾಮರ್ಥ್ಯದ ಟ್ಯಾಂಕ್,ಪಂಪ್ ಮತ್ತು ಜನರೇಟರ್ ಅಳವಡಿಸಿದ್ದಾರೆ. ಪ್ರತಿದಿನವೂ ಈ ವ್ಯಾನ್‌ನಲ್ಲಿ ಸಾಗಿ ಮಡಕೆಗಳಿಗೆ ತಾಜಾ ನೀರನ್ನು ತುಂಬಿಸುತ್ತಿದ್ದಾರೆ. ಬೇಸಿಗೆಯ ದಿನಗಳಲ್ಲಿ ಈ ಮಡಕೆಗಳು ಖಾಲಿಯಿರದಂತೆ ನೋಡಿಕೊಳ್ಳಲು ದಿನಕ್ಕೆ ನಾಲ್ಕು ಬಾರಿ ನೀರನ್ನು ತುಂಬಿಸುತ್ತಾರೆ. ಅಲ್ಲದೆ ನೀರು ಖಾಲಿಯಾದರೆ ತನಗೆ ಮಾಹಿತಿ ನೀಡಲು ಮಡಕೆಗಳ ಬಳಿ ತನ್ನ ಮೊಬೈಲ್ ಸಂಖ್ಯೆಯನ್ನೂ ಅವರು ನಮೂದಿಸಿದ್ದಾರೆ. ಪ್ರತಿಯೊಂದು ಸ್ಥಳದಲ್ಲಿಯೂ ಜನರು ಆರಾಮವಾಗಿ ಕುಳಿತು ನೀರು ಕುಡಿಯಲು ಬೆಂಚ್‌ಗಳನ್ನೂ ಸ್ಥಾಪಿಸಿದ್ದಾರೆ.

ನೀರು ತುಂಬಿಸುವ ಪ್ರತಿ ಟ್ರಿಪ್‌ಗೂ 3ರಿಂದ 4 ಗಂಟೆಗಳು ಬೇಕಾಗುತ್ತಿದ್ದು,ಈಗ ಓರ್ವ ಸಹಾಯಕನನ್ನೂ ನಟರಾಜನ್ ನೇಮಿಸಿಕೊಂಡಿದ್ದಾರೆ. ಅಗತ್ಯವುಳ್ಳವರು ಬಳಸಿಕೊಳ್ಳಲು ಸಾಧ್ಯವಾಗುವಂತೆ ಈ ಮಟಕಾ ಸ್ಟಾಂಡ್‌ಗಳ ಬಳಿ 100 ಸೈಕಲ್ ಪಂಪ್‌ಗಳನ್ನೂ ಅವರು ಇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News