ರೈತರ ಸಾಲ ಮನ್ನಾ ಪ್ರಕ್ರಿಯೆ ನ.1ರಿಂದ ಆರಂಭ: ಎಚ್.ಡಿ.ಕುಮಾರಸ್ವಾಮಿ

Update: 2018-09-25 15:56 GMT

ಬೆಂಗಳೂರು, ಸೆ.25: ರೈತರ ಸಾಲ ಮನ್ನಾ ಮಾಡುವ ಪ್ರಕ್ರಿಯೆಯನ್ನು ನವೆಂಬರ್ ಒಂದರಿಂದ ಪ್ರಾರಂಭಿಸಲಾಗುವುದು. ಈ ಸಂಬಂಧ ಸೆ.29(ಶನಿವಾರ) ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದೇನೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ರೈತರ ಸಾಲ ಮನ್ನಾ ಕುರಿತು ನಡೆದ ಸಭೆಯ ಬಳಿಕ ಮಾತನಾಡಿದ ಅವರು, ರೈತರ ಒಂದು ಲಕ್ಷ ರೂ.ವರೆಗಿನ ಎಲ್ಲ ರೀತಿಯ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರೈತರ ಸಾಲ ಮನ್ನಾ ಪ್ರಕ್ರಿಯೆ ದುರ್ಬಳಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಲ ಮನ್ನಾ ಕುರಿತು ಅರ್ಜಿಯನ್ನು ಸಿದ್ಧಪಡಿಸಲಾಗಿದೆ. ಈ ಅರ್ಜಿಗಳು ಎರಡು ಅಥವಾ ಮೂರು ದಿನಗಳಲ್ಲಿ ನಾಡ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಾಗಲಿದೆ. ಈ ಅರ್ಜಿಗಳನ್ನು ತುಂಬುವ ಮೂಲಕ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.

ಸಹಕಾರಿ ಹಾಗೂ ರಾಷ್ಟ್ರೀಕೃತ ಎರಡು ಕಡೆಗಳಲ್ಲೂ ಸಾಲ ಮನ್ನಾ ಅರ್ಜಿಗಳನ್ನು ತುಂಬಲು ಅವಕಾಶವಿದೆ. ಸಾಲ ಮನ್ನಾ ಅರ್ಜಿ ತುಂಬಿದ ರೈತರ ಅಕೌಂಟಿಗೆ ನೇರವಾಗಿ ಹಣ ಜಮೆಯಾಗಲಿದೆ. ಹೀಗಾಗಿ ರೈತರು ಸಾಲದ ವಿಷಯದಲ್ಲಿ ಬ್ಯಾಂಕ್ ಮುಖ್ಯಸ್ಥರಿಗೆ ಹೆದರಬಾರದು ಎಂದು ಅವರು ಸಲಹೆ ನೀಡಿದರು.

ರೈತರ ಸಾಲಮನ್ನಾ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗುತ್ತದೆ. ಇದರಿಂದ ರೈತರಿಗೆ ಮತ್ತಷ್ಟು ಆತ್ಮವಿಶ್ವಾಸ ಮೂಡಿ, ಬ್ಯಾಂಕ್‌ಗಳಲ್ಲಿ ನಿರ್ಭಯವಾಗಿ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ. ರಾಜ್ಯದ ಸುಮಾರು 44ಲಕ್ಷ ರೈತ ಕುಟುಂಬಗಳಿಗೆ ಈ ಸಾಲ ಮನ್ನಾ ಯೋಜನೆಯ ಲಾಭ ಸಿಗಲಿದೆ ಎಂದು ಅವರು ತಿಳಿಸಿದರು.

ಬ್ಯಾಂಕ್ ಮುಖ್ಯಸ್ಥರಿಗೆ ಸಿಎಂ ಎಚ್ಚರಿಕೆ

ಸಾಲ ಪಾವತಿ ಮಾಡುವಂತೆ ರೈತರಿಗೆ ಪದೇ ಪದೇ ನೋಟಿಸ್ ನೀಡುವ ಬ್ಯಾಂಕ್‌ಗಳ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು. ಸಾಲದ ಹೆಸರಿನಲ್ಲಿ ರೈತರನ್ನು ಹೆದರಿಸುವ ಕೆಲಸ ಮಾಡಿದರೆ ರಾಜ್ಯ ಸರಕಾರ ಸಹಿಸುವುದಿಲ್ಲ. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ವರನಟ ಡಾ.ರಾಜ್‌ಕುಮಾರ್‌ರನ್ನು ದಂತಚೋರ ವೀರಪ್ಪನ್ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನ್ಯಾಯಾಲಯ ನೀಡಿರುವ ತೀರ್ಪು ಕೈ ಸೇರಿದ ಬಳಿಕ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News