ಸ್ಲಂ ಮುಕ್ತಗೊಳಿಸಲು ಆದ್ಯತೆ: ಡಾ.ಜಿ.ಪರಮೇಶ್ವರ್

Update: 2018-09-25 16:02 GMT

ಬೆಂಗಳೂರು, ಸೆ.25: ನಗರದಲ್ಲಿ ಸ್ಲಂಗಳನ್ನು ಮುಕ್ತಗೊಳಿಸುವ ಮೂಲಕ ಅವರಿಗೆ ಉತ್ತಮ ಜೀವನ ಕಟ್ಟಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ಯಲಹಂಕ ಉಪನಗರದ ವಾರ್ಡ್ 4 ವ್ಯಾಪ್ತಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿರುವ 259 ದಲಿತ ಮತ್ತು ಹಿಂದುಳಿದ ಕುಟುಂಬಗಳಿಗೆ ನಿವೇಶನದ ಕ್ರಯಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಯಲಹಂಕದ ಅಂಬೇಡ್ಕರ್ ಭವನದಲ್ಲಿ ಹಲವು ವರ್ಷದಿಂದ ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಇಂದು ಕ್ರಯ ಪತ್ರ ವಿತರಿಸುತ್ತಿದ್ದು, ಈ ಆಸ್ತಿಯ ಹಕ್ಕನ್ನು ನೀಡಲಾಗುತ್ತಿದೆ ಎಂದರು.

ನಗರದ ಹಲವು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅತ್ಯಂತ ಚಿಕ್ಕದಾದ, ಮೂಲಭೂತ ಸೌಲಭ್ಯಗಳಿಲ್ಲದ ಮನೆಗಳಲ್ಲಿದ್ದಾರೆ. ಅಂತಹ ಎಲ್ಲರಿಗೂ ಸೂಕ್ತವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸ್ಲಂಗಳಲ್ಲಿ ವಾಸಿಸುತ್ತಿರುವ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಾವೇರಿ ಕುಡಿಯುವ ನೀರಿನ ಯೋಜನೆಗಾಗಿ ಸರಕಾರದಿಂದ 32 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ವೀರಪ್ಪ ಮೊಯಿಲಿ, ಶಾಸಕ ವಿಶ್ವನಾಥ್, ಮೇಯರ್ ಸಂಪತ್ ರಾಜ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ದಲಿತ ಸಂಘರ್ಷ ಸಮಿತಿ(ಸಮತಾವಾದ)ಯ ಮುಖಂಡ ಮಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News