ಬೆಂಗಳೂರು: ಭಾರಿ ಮಳೆಯಿಂದ ಬೆಳ್ಳಂದೂರು ಕೆರೆಯಲ್ಲಿ ಹೆಚ್ಚಾದ ನೊರೆ

Update: 2018-09-25 16:05 GMT

ಬೆಂಗಳೂರು, ಸೆ.25: ಬೆಂಗಳೂರಿನಲ್ಲಿ ರವಿವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿನ ನೊರೆ ಪ್ರಮಾಣ ಹೆಚ್ಚಾಗಿದ್ದು, ದುರ್ವಾಸನೆ ಬೀರುತ್ತಿದೆ.

ನೊರೆ ಕೆರೆ ಎಂದೇ ಕುಖ್ಯಾತಿ ಪಡೆದಿರುವ ಬೆಳ್ಳಂದೂರು ಕೆರೆಯಲ್ಲಿ ಕಳೆದೆರಡು ದಿನಗಳಿಂದ ನೀರಿನ ಹರಿವು ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೊರೆ ಉತ್ಪತ್ತಿಯಾಗುತ್ತಿದ್ದು, ರಸ್ತೆಯನ್ನು ಆವರಿಸಿಕೊಂಡು, ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ.

ಹತ್ತಿಯಂತೆ ಕೂಡಿರುವ ನೊರೆ ಕೆರೆಯ ಸುತ್ತಲೂ ರಸ್ತೆ ಪಕ್ಕದಲ್ಲಿ ಹರಡಿಕೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಸಂಚಾರ ದಟ್ಟಣೆ ಸಮಸ್ಯೆಯ ಜೊತೆಗೆ ಚರ್ಮ ತುರಿಕೆ ಸೇರಿದಂತೆ ಹಲವು ಖಾಯಿಲೆಗಳು ಹರಡಿಕೊಳ್ಳುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಳ್ಳಂದೂರು ಕೆರೆ ಸೇರಿ ಸುತ್ತಲ ಹಲವು ಕೆರೆಗಳಲ್ಲಿ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದು ಸಾಮಾನ್ಯ ಸಮಸ್ಯೆ ಎಂಬಂತಾಗಿತ್ತು. ಆದರೆ ಯಾವಾಗ ಈ ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಂಡಿತೋ, ಅಂದಿನಿಂದ ಹೆಚ್ಚು ಪ್ರಚಾರ ಪಡೆದುಕೊಂಡಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಬೆಳ್ಳಂದೂರು ಕೆರೆಯಲ್ಲಿ ದಟ್ಟ ಹೊಗೆ ಆವರಿಸಿ ನಂತರ, ಬೆಂಕಿ ಹೊತ್ತಿಕೊಂಡಿತ್ತು. ಈ ವಿಷಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ 5000 ಸೇನಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿ, ಬೆಂಕಿ ನಂದಿಸುವ ಮತ್ತು ಕೆರೆ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಕೆರೆ ಸ್ವಚ್ಛಗೊಂಡರೂ ಕೆರೆಯಲ್ಲಿ ನೊರೆಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೀಗ ಮಳೆ ಹೆಚ್ಚಾಗಿರುವುದರಿಂದ ಬೇರೆ ಬೇರೆ ಕಡೆಗಳಿಂದ ಅತಿಯಾದ ನೀರು ಹರಿದು ಬರುತ್ತಿದ್ದು, ನೊರೆಯೂ ಹೆಚ್ಚಾಗಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News