ಸ್ವಚ್ಛತೆ ಬಗ್ಗೆ ಅರಿವು ಹೊಂದುವುದು ಅಗತ್ಯ: ಡಾ.ಸಿ.ನಾಗರಾಜ

Update: 2018-09-25 17:09 GMT

ಬೆಂಗಳೂರು, ಸೆ.25: ಪ್ಲಾಸ್ಟಿಕ್, ತ್ಯಾಜ್ಯದಿಂದ ಪರಿಸರದಲ್ಲಿ ಅನೇಕ ರೋಗಗಳು ಸೃಷ್ಟಿಯಾಗುತ್ತಿವೆ. ಹಾಗಾಗಿ, ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕೆಂದು ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ನಿರ್ದೇಶಕ ಡಾ.ಸಿ.ನಾಗರಾಜ ತಿಳಿಸಿದ್ದಾರೆ.

ಮಂಗಳವಾರ ನಗರದ ರಾಜೀವ್‌ಗಾಂಧಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛ ಭಾರತ ಸ್ವಸ್ಥ ಭಾರತ ಅಭಿಯಾನದಡಿ ಹಮ್ಮಿಕೊಂಡಿದ್ದ ಮಾಸಿಕ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಂತರಿಕ ಸ್ವಚ್ಛತೆ ಎಷ್ಟು ಮುಖ್ಯವೋ, ಬಾಹ್ಯ ಸ್ವಚ್ಛತೆಯು ಅಷ್ಟೆ ಮುಖ್ಯ. ಇದಕ್ಕೆ ಆದ್ಯತೆ ನೀಡಿದರೆ ಬಹುಪಾಲು ರೋಗಗಳಿಂದ ಮುಕ್ತವಾಗಬಹುದು. ಸ್ವಚ್ಛಭಾರತ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ನಮ್ಮ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಬೇಕಿದೆ ಎಂದರು.

ಸ್ವಸ್ಥ ಆರೋಗ್ಯ, ವಾತಾವರಣ, ಸಮಾಜದ ನಿರ್ಮಾಣದ ದಿಶೆಯಲ್ಲಿ ಸ್ವಚ್ಛತೆ ಬಹುಮುಖ್ಯವಾಗಿದ್ದು, ಅದರೊಂದಿಗೆ ಪರಿಸರ ರಕ್ಷಣೆಯ ಕಾರ್ಯವೂ ಆಗಬೇಕು. ಪ್ರಕೃತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದಾಗ, ಅದು ಮನುಷ್ಯನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರವನ್ನು ಹಾಳುಗೆಡವದೆ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕಸ, ತ್ಯಾಜ್ಯ ಕಂಡಾಗ ಅದನ್ನು ತೆರವುಗೊಳಿಸುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಕೆಲಸ ಎಂದು ಭಾವಿಸಬಾರದು. ಬದಲಿಗೆ ನಮ್ಮ ಜವಾಬ್ದಾರಿಯು ಹೌದು. ಪ್ರತಿಯೊಬ್ಬರೂ ಸ್ವಚ್ಛತೆ ನಮ್ಮ ಕರ್ತವ್ಯ ಎಂದು ಪರಿಭಾವಿಸಬೇಕು ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಎಸ್.ಸತ್ಯಪ್ರಕಾಶ್, ಶ್ವಾಸಕೋಶ ಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ಜೆ.ಎಸ್.ಅಕ್ಷತಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News