ರಾಜಕಾಲುವೆ ನಿರ್ವಹಣೆ ಮಾಡದ ವಿಚಾರ: ಬಿಬಿಎಂಪಿಗೆ ಚಾಟಿ ಬೀಸಿದ ಹೈಕೋರ್ಟ್

Update: 2018-09-25 17:18 GMT

ಬೆಂಗಳೂರು, ಸೆ.25: ರಾಜಕಾಲುವೆಯನ್ನು ನಿರ್ವಹಣೆ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬಿಬಿಎಂಪಿಗೆ ಚಾಟಿ ಬೀಸಿದೆ. ಹಾಗೂ ಹಾಲಿ ಸಮಿತಿ ಈಗ ನಡೆಸುತ್ತಿರುವ ತಿಂಗಳಿಗೆ ಎರಡು ಸಭೆಗಳಿಗೆ ಬದಲಾಗಿ ಇನ್ನು ಮುಂದೆ ಪ್ರತಿವಾರ ಸಭೆ ನಡೆಸಲು ಸೂಚಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ನಿರ್ವಹಣೆ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಕೋರ್ಟ್‌ಗೆ ಕರೆಯಿಸಿಕೊಂಡ ಮುಖ್ಯ ನ್ಯಾಯಮೂರ್ತಿಗಳು ಕೆಲವು ಸಲಹೆಗಳನ್ನು ನೀಡಿದರು.

ನಗರದ ಸರ್ವಾಂಗೀಣ ವಲಯದ ದೈನಂದಿನ ಸಮಸ್ಯೆಗಳ ಕುರಿತಂತೆ ಹಾಲಿ ಇರುವ ಸಮಿತಿಗೆ ಹೈಕೋರ್ಟ್‌ನ ಹಿರಿಯ ವಕೀಲರನ್ನೂ ಸೇರ್ಪಡೆ ಮಾಡಿಕೊಳ್ಳಿ. ಹಾಲಿ ಸಮಿತಿ ಈಗ ನಡೆಸುತ್ತಿರುವ ತಿಂಗಳಿಗೆ ಎರಡು ಸಭೆಗಳಿಗೆ ಬದಲಾಗಿ ಇನ್ನು ಮುಂದೆ ಪ್ರತಿವಾರ ಸಭೆ ನಡೆಸಬೇಕು. ರಾಜಕಾಲುವೆ ನಿರ್ವಹಣೆಯಲ್ಲಿ ಬೆಂಗಳೂರು ಒಳಚರಂಡಿ ಮಂಡಳಿ ಹಾಕಿರುವ ಪೈಪ್ ಲೈನ್‌ಗಳ ಕುರಿತಂತೆ ಇರುವ ದೂರುಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು.

ಹಾಲಿ ಸಭೆಗೆ ಹೈಕೋರ್ಟ್‌ನ ಹಿರಿಯ ವಕೀಲ ಆದಿತ್ಯ ಸೋಂಧಿ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿ ಸಭೆ ನಡೆಸಬೇಕು ಮತ್ತು ಕೋರ್ಟ್‌ಗೆ ವರದಿ ನೀಡಬೇಕು. ಕಮಿಟಿಯಲ್ಲಿ 13 ಜನ ಅಧಿಕಾರಿಗಳು ಇದ್ದಾರೆ, ಕಮಿಟಿಯನ್ನು ರಚಿಸಿ ಮೂರು ವರ್ಷ ಆಯಿತು ಆದರೂ ರಾಜಕಾಲುವೆ ನಿರ್ವಹಣೆ ಸೇರಿದಂತೆ ಇನ್ನಿತರ ಕೆಲಸಗಳು ಆಗಿಲ್ಲ. ಇನ್ನು ಮುಂದೆಯಾದರೂ ಸಭೆಯನ್ನು ನಡೆಸಿ ರಾಜಕಾಲುವೆಯನ್ನು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿತು.

ವರದಿ ಸಲ್ಲಿಕೆ: ರಸ್ತೆ ಗುಂಡಿ ಭರ್ತಿ ಪರಿಶೀಲನೆ ಮಾಡಿದ ಕೋರ್ಟ್ ಆಯೋಗ ಇದೇ ವೇಳೆ ನ್ಯಾಯಪೀಠಕ್ಕೆ ತನ್ನ ವರದಿ ಸಲ್ಲಿಸಿತು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ.ಉಮಾ ಈ ವರದಿ ಸಲ್ಲಿಸಿದರು. ಸೆ.26ರಂದು ಮಹಾಲಕ್ಷ್ಮೀಲೇಔಟ್ ಪರಿಶೀಲನೆ ನಡೆಸುವಂತೆ ನ್ಯಾಯಪೀಠ ಆಯೋಗಕ್ಕೆ ಸೂಚಿಸಿದೆ. ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News