ಅನ್ನಭಾಗ್ಯ ಹಮಾಲಿಗಾರರ ಮುಷ್ಕರ: ಹಮಾಲಿ ಕಾರ್ಮಿಕ ಮಂಡಳಿಗೆ ಆಗ್ರಹ

Update: 2018-09-25 17:21 GMT

ಬೆಂಗಳೂರು, ಸೆ.25: ಆಹಾರ ಧಾನ್ಯ ಎತ್ತುವಳಿಗೆ ಪ್ರತಿ ವರ್ಷ ಕೂಲಿ ನಿಗದಿ ಕಡ್ಡಾಯ ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿ ಅನ್ನಭಾಗ್ಯ ಹಮಾಲಿ ಕಾರ್ಮಿಕರು ಕೆಲಸ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ.

ಮಂಗಳವಾರ ಕರ್ನಾಟಕ ಶ್ರಮಿಕ ಶಕ್ತಿ, ಕೆಎಫ್‌ಸಿಎಸ್‌ಸಿ, ಟಿಎಪಿಸಿಎಂಎಸ್ ಮತ್ತು ರಾಜ್ಯ ಉಗ್ರಾಣ ನಿಗಮ ಹಮಾಲಿ ನೌಕರರ ನೇತೃತ್ವದಲ್ಲಿ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.

ಪಡಿತರ ವಿತರಕ ವ್ಯವಸ್ಥೆಯಲ್ಲಿ ಮೂರು ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರು ಯಾವುದೇ ಕಾರ್ಮಿಕ ಕಾನೂನುಗಳಿಲ್ಲದೇ ಶೋಷಿಸಲಾಗುತ್ತಿದೆ. 2014ರಲ್ಲಿ ನಡೆಸಿದ ಮಹತ್ವದ ಹೋರಾಟದ ಫಲವಾಗಿ, ಇಎಸ್‌ಐ ಪಿಎಫ್ ಸೌಲಭ್ಯಗಳನ್ನು ಜಾರಿಗೆ ಸರಕಾರವು ಒಪ್ಪಿಕೊಂಡಿತು. ಆದರೆ, ಇಂದಿಗೂ ಅದು ಪರಿಣಾಮಕಾರಿಯಾಗಿ ಎಲ್ಲಡೆ ಜಾರಿಗೊಳಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ಸರಕಾರ ಹೆಮ್ಮೆಯಿಂದ ಹೇಳಿಕೊಳ್ಳುವ ಅನ್ನಭಾಗ್ಯ ಯೋಜನೆಯನ್ನು ಇಡೀ ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಈ ಲೋಡಿಂಗ್, ಅನ್ ಲೋಡಿಂಗ್ ಕಾರ್ಮಿಕರ ಪರಿಸ್ಥಿತಿ ಸರಿಯಿಲ್ಲ. ಆದ್ದರಿಂದ ಅನಿವಾರ್ಯವಾಗಿ ಕೆಲಸ ಬಂದ್ ಮಾಡಿ ಮುಷ್ಕರ ಹೂಡುವ ಮತ್ತು ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸುವ ಪರಿಸ್ಥಿತಿ ಉಂಟಾಗಿದೆ ಎಂದು ಹಮಾಲಿ ನೌಕರರು ಬೇಸರ ವ್ಯಕ್ತಪಡಿಸಿದರು.

ಸುಮಾರು 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಮಾಲಿಗಳಿಗೆ ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ರದ್ಧತಿ ಕಾಯ್ದೆ 1970ರ ಪ್ರಕಾರ ಗುರುತಿನ ಚೀಟಿ, ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ನೀಡಬೇಕು. ಆದರೆ, ಈ ಯಾವುದೇ ಸೌಲಭ್ಯಗಳನ್ನು ನೀಡದೆ ಹಮಾಲಿಗಳನ್ನು ಶೋಷಿಸಲಾಗುತ್ತಿದೆ. ಇವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಕೂಲಿ ದರವನ್ನು ಕ್ವಿಂಟಾಲ್‌ಗೆ 30 ರೂಪಾಯಿ ಹೆಚ್ಚಿಸಬೇಕು. ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲೂ ಹಮಾಲಿ ಕಾರ್ಮಿಕರ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News