ದುನಿಯಾ ವಿಜಯ್‌ಗೆ ಜೈಲೇ ಗತಿ

Update: 2018-09-26 14:43 GMT

ಬೆಂಗಳೂರು, ಸೆ.26: ಜಿಮ್ ತರಬೇತುದಾರ ಮಾರುತಿ ಗೌಡ ಅಪಹರಣ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಹಾಗೂ ಸಹಚರರಿಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದೆ. ಬುಧವಾರ ನಗರದ 8ನೆ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದು, ಇದರಿಂದ ದುನಿಯಾ ವಿಜಿ ಹಾಗೂ ಆಪ್ತರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲೇ ಇರಬೇಕಿದೆ.

ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ತನ್ನ ಆದೇಶದ ತೀರ್ಪನ್ನು ಸೆ. 26ಕ್ಕೆ ಕಾಯ್ದಿರಿಸಿತ್ತು. ನ್ಯಾ.ಮಹೇಶ ಬಾಬು ಅವರು ಆದೇಶವನ್ನು ಕಾಯ್ದಿರಿಸಿದ್ದರು. ಜಾಮೀನಿಗಾಗಿ ಪ್ರಸಾದ್, ವಿಜಯ್ ಹಾಗೂ ಮಣಿ ಅರ್ಜಿ ಸಲ್ಲಿಸಿದ್ದರು. ಆದರೆ, ಮಹೇಶ್ ಬಾಬು ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಇನ್ನು, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ಮಾತ್ರ ದುನಿಯಾ ವಿಜಿ ಜಾಮೀನು ಅರ್ಜಿಯ ಹಣೆಬರಹ ನಿರ್ಧಾರವಾಗಲಿದೆ. ಅಲ್ಲಿಯವರೆಗೂ ಪರಪ್ಪನ ಅಗ್ರಹಾರವೇ ಉಳಿಯಬೇಕಿದೆ.

ಏನಿದು ಪ್ರಕರಣ?: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕಳೆದ ಶುಕ್ರವಾರ ಮಿಸ್ಟರ್ ಬೆಂಗಳೂರು ಎಂಬ ದೇಹದಾರ್ಢ್ಯ ಸ್ಪರ್ಧೆ ಆಯೋಜನೆಗೊಂಡಿತ್ತು. ವೀಕ್ಷಣೆಗಾಗಿ ಮಾರುತಿಗೌಡ ಅಲ್ಲಿಗೆ ತೆರಳಿದ್ದರು. ದುನಿಯಾ ವಿಜಿ ಮತ್ತು ಸಹಚರರೂ ಈ ಸ್ಪರ್ಧೆಗೆ ಬಂದಿದ್ದರು. ಈ ವೇಳೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ದುನಿಯಾ ವಿಜಿ ಮತ್ತು ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. 

‘ಮಾರುತಿಗೌಡ ಹೇಳಿಕೆ’
ವಿಚಾರಣೆಗೂ ಮುನ್ನ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ಮಾರುತಿ ಗೌಡ, ಹಲ್ಲೆ ನಡೆದಾಗ ಜಿಮ್ ಕೋಚರ್ ಪ್ರಸಾದ್, ನಟ ದುನಿಯಾ ವಿಜಿ, ಮಣಿ ಇದ್ದರು. ನಿಮ್ಮ ಚಿಕ್ಕಪ್ಪ ಎಲ್ಲಿ ಅಂತ ಮೊದಲು ಕೇಳಿ, ಬಳಿಕ ನನ್ನನ್ನು ಕಾರಿನಲ್ಲಿ ಕರೆದೊಯ್ದರು. ಕಾರಿನಲ್ಲಿ ಸುತ್ತಾಡಿಸಿ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ಯಾವೆಲ್ಲಾ ಮೊಕದ್ದಮೆ..?
ದುನಿಯಾ ವಿಜಯ್ ಮೇಲೆ ಅಪಹರಣ, ಹಲ್ಲೆ, ಕೊಲೆ, ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365(ಅಪಹರಣ), 342(ಅಕ್ರಮ ಬಂಧನ), 325(ಹಲ್ಲೆ), 506(ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ. ವಿಜಿ ಮೇಲೆ ದಾಖಲಾಗಿರುವ ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News