ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷನ ಹತ್ಯೆ ಪ್ರಕರಣ; ಗುಂಡಿಕ್ಕಿ ಆರೋಪಿಯ ಸೆರೆ

Update: 2018-09-26 12:45 GMT

ಬೆಂಗಳೂರು, ಸೆ.26: ಯುವ ಕಾಂಗ್ರೆಸ್ ಯಲಹಂಕ ಬ್ಲಾಕ್ ಅಧ್ಯಕ್ಷ ಅರುಣ್‌ ಕುಮಾರ್ ಕೊಲೆ ಪ್ರಕರಣದ ಆರೋಪಿಯನ್ನು ಗುಂಡು ಹೊಡೆದು ನಗರದ ಚಿಕ್ಕಜಾಲ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ.

ಮನೋಜ್ ಯಾನೆ ಕೆಂಪ ಗುಂಡೇಟಿನಿಂದ ಗಾಯಗೊಂಡು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತನ ಸ್ನೇಹಿತ ಮಂಜೇಗೌಡ ಎಂಬಾತನನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ವಿವಿಧ ಠಾಣೆಗಳಲ್ಲಿ ಅಪಹರಣ, ಕೊಲೆಯತ್ನ ಮತ್ತು ಹಲ್ಲೆ ಪ್ರಕರಣಗಳು ಮನೋಜ್ ವಿರುದ್ಧ ದಾಖಲಾಗಿವೆ. ಆರೋಪಿಗಳಿಬ್ಬರು ಚಿಕ್ಕಜಾಲ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿನ ಸರ್ವೀಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾರೆ ಎಂಬ ಸುದ್ದಿ ತಿಳಿದ ಯಲಹಂಕ ಎಎಸ್ಸೈ ಮಂಜೇಗೌಡ ಮತ್ತು ವಿದ್ಯಾರಣ್ಯಪುರ ಎಸ್ಸೈ ರಾಮಮೂರ್ತಿ ಅವರ ನೇತೃತ್ವದ ತಂಡ ಕಾರನ್ನು ಅಡ್ಡಗಟ್ಟಿದ್ದಾರೆ. ಆರೋಪಿಗಳನ್ನು ಹಿಡಿಯಲು ಹೋದಾಗ ಆರೋಪಿ ಮನೋಜ್ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ತಕ್ಷಣ ಎಸ್ಸೈ ಮಂಜೇಗೌಡ ಮತ್ತು ರಾಮಮೂರ್ತಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಎಚ್ಚರಿಕೆ ನೀಡಿದರೂ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಎಂದು ತಿಳಿದುಬಂದಿದೆ.

ಆತ್ಮರಕ್ಷಣೆಗೆ ಪೊಲೀಸರು ಹಾರಿಸಿದ ಗುಂಡುಗಳು ಆತನ ಕೈ ಮತ್ತು ಕಾಲಿಗೆ ತಗುಲಿದ್ದರಿಂದ ಕುಸಿದು ಬಿದ್ದ. ತಕ್ಷಣ ಆತನನ್ನು ಸುತ್ತುವರಿದ ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.

ಘಟನೆಯಲ್ಲಿ ಮುಖ್ಯಪೇದೆ ಉದಯ್ ಕುಮಾರ್ ಹಾಗೂ ಪೇದೆ ಮಹಾದೇವಮೂರ್ತಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News