ಸರಕಾರಿ ಶಾಲೆಗಳ ಗುಣಾತ್ಮಕ ಬೆಳವಣಿಗೆಗೆ ರೋಶಿನಿ ಯೋಜನೆ ಜಾರಿ: ಎಚ್.ಡಿ.ಕುಮಾರಸ್ವಾಮಿ

Update: 2018-09-26 13:34 GMT

ಬೆಂಗಳೂರು, ಸೆ.26: ಖಾಸಗಿ ಶಾಲೆಗಳಲ್ಲಿರುವ ಎಲ್ಲ ಗುಣಾತ್ಮಕ ಯೋಜನೆಗಳನ್ನು ಸರಕಾರಿ ಶಾಲೆಗಳಲ್ಲಿ ಜಾರಿ ಮಾಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ರೋಶಿನಿ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ಬಿಬಿಎಂಪಿ ಹಾಗೂ ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್ ಗಾರ್ಡ್ ಸಹಭಾಗಿತ್ವದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ್ದ ರೋಶಿನಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 500ಕೋಟಿ ರೂ.ವೆಚ್ಚದಲ್ಲಿ ಬಿಬಿಎಂಪಿ ಶಾಲೆಗಳನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೇರಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಶಾಲೆಗಳಲ್ಲಿ ಶೇ.90ರಷ್ಟು ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಹಲವು ಸಮಸ್ಯೆಗಳ ನಡುವೆಯು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ಮುಂದೆ ಬಿಬಿಎಂಪಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಕಲಿಕೆ, ಆಟ ಪಾಠದಲ್ಲಿ ಯಾವುದೆ ಕೊರತೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ನಾನು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಬಿಎಂಪಿ ಶಾಲೆಗಳಿಗೆ ಆಗಾಗ ಭೇಟಿ ನೀಡಿ, ಶಿಕ್ಷಣ, ಮೂಲಭೂತ ಸೌಲಭ್ಯ, ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕುಂದು-ಕೊರತೆಗಳನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಬಿಬಿಎಂಪಿ ಅಧಿಕಾರಿಗಳು ತಮ್ಮ ಪಾಲಿನ ಕೆಲಸವನ್ನು ಬದ್ಧತೆಯಿಂದ ಮಾಡಬೇಕು. ಪ್ರತಿಯೊಂದಕ್ಕೂ ನ್ಯಾಯಾಲಯದ ಸೂಚನೆ ಬರುವವರೆಗೆ ಕಾಯಬಾರದು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮೂರು-ನಾಲ್ಕು ಬಾರಿ ಸಭೆ ನಡೆಸಿದ್ದಾರೆ. ಆದರೂ ಅಧಿಕಾರಿಗಳು ತಮ್ಮ ಉದಾಸೀನತೆಯನ್ನು ಬಿಟ್ಟಿಲ್ಲ. ಹೀಗೆಯೆ ಮುಂದುವರೆದರೆ ನಿರ್ಲಕ್ಷದ ಆರೋಪದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಕೆರೆಗಳ ಅಭಿವೃದ್ಧಿಗೆ ಎಂಎನ್‌ಸಿ ಮುಂದಾಗಲಿ: ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ ಮೈಕ್ರೋಸಾಫ್ಟ್ ಕಂಪೆನಿ ಮುಂದೆ ಬಂದಂತೆ, ಕೆರೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಕಂಪೆನಿಗಳು ಮುಂದಾಗಬೇಕು. ಇದಕ್ಕೆ ಅಗತ್ಯವಾದ ನೆರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಈ ಹಿಂದೆ ಬೆಂಗಳೂರು ನಗರದಲ್ಲಿ ಸಾಕಷ್ಟು ಕೆರೆಗಳು ಇದ್ದವು. ರಿಯಲ್ ಎಸ್ಟೇಟ್ ಮಾಫಿಯಾದ ಹಾವಳಿಯಿಂದಾಗಿ ಹಲವು ಕೆರೆಗಳು ಮುಚ್ಚಿ ಹೋಗಿವೆ. ಈಗ ಉಳಿದಿರುವ ಕೆರೆಗಳನ್ನಾದರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪೆನಿಗಳು ಸರಕಾರದ ಜತೆಗೆ ಸಹಕರಿಸಬೇಕು ಎಂದು ಅವರು ಹೇಳಿದರು. ಈ ವೇಳೆ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರಿದ್ದರು.

ಎರಡು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್

ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಇನ್ನೆರಡು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ. ಮುಂದಿನ ಐದು ವರ್ಷದೊಳಗೆ ಎಲ್ಲ ಡೀಸೆಲ್, ಪೆಟ್ರೋಲ್ ಬಸ್‌ಗಳ ಬದಲಿಗೆ ಎಲೆಕ್ಟ್ರಿಕ್ ಬಸ್‌ಗಳನ್ನೆ ಹಾಕಲಾಗುವುದು.

ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಬಳಿ ಚರ್ಚೆ ನಡೆಸುತ್ತೇನೆ. ಭಡ್ತಿ ವಿಷಯವು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ ಎನ್ನುವ ಸುಪ್ರೀಂ ಕೋರ್ಟ್‌ನ ಸೂಚನೆ ಕುರಿತಂತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News