ಝೀರೋ ಟ್ರಾಫಿಕ್ ಸೇವೆ ಬಳಸಿಕೊಂಡರೆ ಹೊಟ್ಟೆ ಉರಿ ಏಕೆ?: ಉಪಮುಖ್ಯಮಂತ್ರಿ ಪರಮೇಶ್ವರ್

Update: 2018-09-26 13:49 GMT

ಬೆಂಗಳೂರು, ಸೆ.26: ನಗರದಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಸೇರಿದಂತೆ ಪ್ರಮುಖ ಗಣ್ಯರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಇದ್ದ ರೀತಿಯಲ್ಲಿಯೇ ಗೃಹ ಸಚಿವರಿಗೂ ಆ ವ್ಯವಸ್ಥೆಯಿದೆ. ಹೀಗಾಗಿ, ಅದನ್ನು ನಾನು ಬಳಸಿಕೊಂಡಿದ್ದೇನೆ. ಅದಕ್ಕೆ ಯಾಕೆ ಹೊಟ್ಟೆ ಉರಿ ಎಂದು ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಿಡಿಮಿಡಿಗೊಂಡಿದ್ದಾರೆ.

ಕೊಡವ ಸಮಾಜ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ನಗರದಲ್ಲಿ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಡಿಸಿಎಂ ಝೀರೋ ಟ್ರಾಫಿಕ್ ಮೂಲಕ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗಣ್ಯ ವ್ಯಕ್ತಿಗಳಿಗೆ ಇರುವ ರೀತಿಯಲ್ಲಿಯೇ ಗೃಹ ಸಚಿವರಿಗೂ ಈ ವ್ಯವಸ್ಥೆಯಿದೆ. ಅದನ್ನು ಮಾತ್ರ ಬಳಸಿಕೊಂಡಿದ್ದೇನೆ ಎಂದರು.

ಹಿಂದಿನ ಸರಕಾರದಲ್ಲಿ ಗೃಹ ಸಚಿವರಾಗಿದ್ದವರು ಝೀರೋ ಟ್ರಾಫಿಕ್ ಬೇಡ ಎಂದಿದ್ದರು. ಆದರೆ, ನಾನೇನು ಹೊಸದಾಗಿ ಮಾಡಿಕೊಂಡಿಲ್ಲ. ಇರುವ ಅವಕಾಶವನ್ನು ಅಷ್ಟೇ ಬಳಕೆ ಮಾಡಿಕೊಂಡಿರುವುದು ಎಂದು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ಝೀರೋ ಟ್ರಾಫಿಕ್‌ನಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ. ಆದರೆ, ಪ್ರತಿದಿನ ಹಲವಾರು ಕಾರ್ಯಕ್ರಮಗಳು, ಸಭೆಗಳು ಇರುವುದರಿಂದ ಸಮಯವನ್ನು ಪಾಲಿಸಬೇಕಾದ ಕಾರಣದಿಂದಾಗಿ ಇದನ್ನು ಬಳಸಿಕೊಳ್ಳುತ್ತಿದ್ದೇನೆ. ಸಾಧ್ಯವಾದಷ್ಟು ಟ್ರಾಫಿಕ್ ಆಗದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News