ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಸರಕಾರ: ಪ್ರೊ.ಬಿ.ಕೆ.ಚಂದ್ರಶೇಖರ್

Update: 2018-09-26 14:30 GMT

ಬೆಂಗಳೂರು, ಸೆ.26: ಕೇಂದ್ರ ಸರಕಾರ ಯುಜಿಸಿ ಮೂಲಕ ಸರ್ಜಿಕಲ್ ಸ್ಟ್ರೈಕ್ ದಿನವನ್ನು ಕಾಲೇಜುಗಳಲ್ಲಿ ಆಚರಿಸಲು ಆದೇಶ ನೀಡುವ ಮೂಲಕ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಿಕ್ಷಣ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಗುಲಾಮರಾಗಬಾರದು. ಕೇಂದ್ರ ಸರಕಾರ ಸೆ.29ರಂದು ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಆಚರಿಸುವ ಘೋಷಣೆ ಮಾಡಿದೆ. ಇದಕ್ಕೆ ರಾಜ್ಯದಲ್ಲಿ ಆಚರಿಸಲು ಕರ್ನಾಟಕ ಸರಕಾರ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರಕಾರ ಈ ಮಾದರಿಯ ದಿನಾಚರಣೆಗೆ ನಿರ್ಧರಿಸಿದೆ. ಈ ಮೂಲಕ ಅತ್ಯಂತ ಪ್ರಮುಖ, ಗಂಭೀರ ವಿಚಾರವಾಗಿರುವ ಸೇನೆಯ ಕಾರ್ಯಾಚರಣೆಯನ್ನು, ತಮ್ಮ ರಾಜಕೀಯ ಲಾಭ ಹಾಗೂ ಪ್ರಚಾರಕ್ಕೆ ಕೇಂದ್ರ ಸರಕಾರ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.

ಈ ಕಾರ್ಯ ಮಾಡುವುದರಿಂದ ಸೇನೆಯ ಕಾರ್ಯಾಚರಣೆಗೆ ರಾಜಕೀಯ ಸ್ವರೂಪ ಕೊಟ್ಟಂತೆ ಆಗಲಿದೆ. ಸೇನಾ ಮುಖ್ಯಸ್ಥ ರಾವತ್ ಅವರು ಕೇಂದ್ರ ಸರಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಈ ಹಿಂದಿನ ಯಾವೊಬ್ಬ ಸೇನಾ ಮುಖ್ಯಸ್ಥರು ಈ ರೀತಿ ನಡೆದುಕೊಂಡಿರಲಿಲ್ಲ. ಈ ಕಾರ್ಯ ವಿದ್ಯಾರ್ಥಿಗಳಿಗೆ ವೀರಾವೇಶ, ದ್ವೇಷದ ಸ್ವರೂಪ ತಂದುಕೊಡಲಿದೆ. ಸೆ.29ರಂದೇ ಸರ್ಜಿಕಲ್ ಸ್ಟ್ರೈಕ್ ಅಂತ ಮಾಡೋದು ಏಕೆ? 2016ಕ್ಕಿಂತ ಮೊದಲು ಈ ರೀತಿ ಆಗಿರಲಿಲ್ಲವಾ? ಇದೇ ಏಕೆ? ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿದೆಯೇ ಎಂದು ಅವರು ಪ್ರಶ್ನಿಸಿದರು.

ಯುಜಿಸಿ ಅಸ್ತಿತ್ವಕ್ಕೆ ಬಂದು 65 ವರ್ಷವಾಗಿದೆ. ಸಂಸತ್ ನೀಡಿದ್ದ ಸ್ವಾಯತ್ತತೆ ಕಡಿಮೆ ಆಗಿದೆ. ಇದಕ್ಕೆ ಮೂಗುದಾರ ಹಾಕುವುದು ಸರಿಯಲ್ಲ. ಆರಂಭದ ಮೊದಲ ಹತ್ತು ವರ್ಷ ಎಲ್ಲಾ ಸರಿ ಇತ್ತು. ಆನಂತರ ಬಂದ ಎಲ್ಲಾ ಸರಕಾರಗಳು ಶೈಕ್ಷಣಿಕ ಸ್ವಾತಂತ್ರ ಕಳೆಯುವಂತೆ ಮಾಡಿದರು. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗಿದೆ ಎಂದು ಚಂದ್ರಶೇಖರ್ ದೂರಿದರು.

ದಿನಸಿ ಅಂಗಡಿ ನಡೆಸೋರೆಲ್ಲಾ ಸಿಂಡಿಕೇಟ್ ಸದಸ್ಯರಾದರು. ಎಂತ ಕಾಲ ಬಂತು ನೋಡಿ. ಸಿಂಡಿಕೇಟ್ ನೇಮಕ ಕೂಡ ಕೆಟ್ಟು ಹೋಗಿದೆ. ಪಿಎಚ್‌ಡಿ ಮಾಡಿದವರಿಗೆ ಸಿಂಡಿಕೇಟ್‌ಗೆ ನೇಮಕವಾಗುವ ಅವಕಾಶ ಒದಗಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಘೋಷಿಸಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.

ಪುಣೆಯಲ್ಲಿ ಐವರು ಬುದ್ಧಿಜೀವಿಗಳನ್ನು ನಕ್ಸಲರೆಂದು ಪರಿಗಣಿಸಿ ಬಂಧಿಸಲಾಗಿದೆ. ಈ ವಿಚಾರವನ್ನು ಸುಪ್ರಿಂ ಕೋರ್ಟ್ ಕೆಲವೇ ದಿನಗಳಲ್ಲಿ ಇತ್ಯರ್ಥ ಮಾಡಲಿದೆ ಎಂಬ ವಿಶ್ವಾಸವಿದೆ. ಇದರ ಹಿಂದೆ ಜನರಲ್ಲಿ ಭಯ ಹುಟ್ಟಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಹೃದಯವಂತಿಕೆಯ ಹಾಗೂ ಸ್ವಾತಂತ್ರದ ಹರಣ ಮಾಡುವ ಕಾರ್ಯ ಆಗುತ್ತಿದೆ. ಸರಕಾರದ ಈ ಕ್ರಮ ಅಘೋಷಿತ ತುರ್ತು ಪರಿಸ್ಥಿತಿ ಹುಟ್ಟಿಸುವಂತಿದೆ. ಕೇಂದ್ರ ಸರಕಾರ ಜನವಲಯದಲ್ಲಿ ಭೀತಿ ಹುಟ್ಟಿಸುವ ಕಾರ್ಯ ಮಾಡುತ್ತಿದೆ ಎನ್ನುವ ಅಭಿಪ್ರಾಯ ನನ್ನದು ಎಂದು ಅವರು ಹೇಳಿದರು.

ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಯಾವೊಬ್ಬ ಹೋರಾಟಗಾರರ ಸಾವಿಗೆ ಪ್ರತಿಕ್ರಿಯಿಸಿಲ್ಲ. ದಾಭೋಲ್ಕರ್, ಕಲಬುರ್ಗಿ ಸಾವಿನ ಬಗ್ಗೆ ಒಂದೂ ಮಾತಾಡಿಲ್ಲ. ಜಾಣ ಕಿವುಡು, ಮರೆವು ಪ್ರದರ್ಶಿಸುತ್ತಿದ್ದಾರೆ. ನಮ್ಮ ರಾಜ್ಯದ ಬದಲು ಬೇರೆ ಕಡೆ ಇಂತಹ ಹತ್ಯೆ ಆಗಿದ್ದರೆ ಸುಮ್ಮನಿರುತ್ತಿದ್ದರಾ? ತಾವಿತ್ತ ಭರವಸೆ ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಅವರು ದೂರಿದರು.

ಆದರೆ ಅತ್ಯುತ್ತಮ ಸಂವಹನ ಗುಣ ಇದ್ದು ಅದನ್ನು ಬಳಸಿಕೊಂಡು ವಂಚಿಸುವ ಕಾರ್ಯ ಮಾಡುತ್ತಿದೆ. ಎಲ್ಲವೂ ನರೇಂದ್ರ ಮೋದಿ ಹಿಡಿತದಲ್ಲಿದೆ. ಕೇಂದ್ರ ಸರಕಾರದ ವೈಫಲ್ಯವನ್ನು ವಿವರಿಸುವ ಪಾದಯಾತ್ರೆಯನ್ನು ನಮ್ಮ ಪಕ್ಷ ಮಾಡಬೇಕು. ಅದನ್ನು ಪಕ್ಷದ ಸಭೆಯಲ್ಲಿ ನೆನಪಿಸುತ್ತೇನೆ ಎಂದು ಚಂದ್ರಶೇಖರ್ ಹೇಳಿದರು.

ಯುಜಿಸಿ ಸಾಕುನಾಯಿ ಯುಜಿಸಿ ಅನ್ನೋದು ನಾವು ಮನೇಲಿ ಸಾಕಿದ ನಾಯಿ ಥರಾ ಆಗಿದೆ. ವಿಶ್ವವಿದ್ಯಾಲಯಗಳ ವಾತಾವರಣ ಹಾಳಾಗಿದೆ. ಸಿಂಡಿಕೇಟ್ ಸದಸ್ಯರ ನೇಮಕವಂತೂ ಹೊಲಸಾಗಿದೆ. ಕೇಂದ್ರ ಸರಕಾರ ಹೇಳಿದ ಹಾಗೇ ಕೇಳುವಂತಾಗಿವೆ. ಹಿಂದೆ ಕುವೆಂಪು, ಪಾವಟೆ, ದೇ.ಜವರೇಗೌಡ ಸೇರಿ ಕೆಲ ಮಹನೀಯರು ಸರಕಾರ ಮತ್ತು ಸಚಿವರಿಗೆ ಕ್ಯಾರೆ ಅಂತಿರಲಿಲ್ಲ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು.

-ಪ್ರೊ.ಬಿ.ಕೆ.ಚಂದ್ರಶೇಖರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News