ಆಧುನಿಕತೆ ಪ್ರಭಾವದಿಂದ ಜಾನಪದ ಸಂಸ್ಕೃತಿ ನಾಶ: ಡಾ.ಸಂಧ್ಯಾರೆಡ್ಡಿ

Update: 2018-09-26 14:36 GMT

ಬೆಂಗಳೂರು, ಸೆ.26: ಆಧುನಿಕತೆ ಪ್ರಭಾವದಿಂದಾಗಿ ಜಾನಪದ ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಇಂದಿನ ಜಾಗತೀಕರಣ ಸಂದರ್ಭದಲ್ಲಿ ಅಲ್ಪಸ್ವಲ್ಪ ಉಳಿದುಕೊಂಡಿರುವ ಜಾನಪದ ಕಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಜಾನಪದ ವಿದ್ವಾಂಸೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅಭಿಪ್ರಾಯಿಸಿದ್ದಾರೆ.

ಬುಧವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾನಪದ ಸಂಭ್ರಮ ಹಾಗೂ ಜಾಗತಿಕ ಜಾನಪದ ಸಂವೇದನೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಧುನಿಕತೆಯಲ್ಲಿ ನಶಿಸುತ್ತಿರುವ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಗ್ರಾಮೀಣ ಪ್ರದೇಶದ ಜನತೆಯ ಮೇಲಿದೆ. ಯುವಕರು ತಮ್ಮ ಹಿರಿಯರಿಂದ ಇವುಗಳನ್ನು ಕಲಿತು ಭವಿಷ್ಯತ್ತಿನ ಜನತೆಗೆ ಉಳಿಸಬೇಕು. ಈ ನಿಟ್ಟಿನಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ ಜಾನಪದ ಕುರಿತು ಅರಿವು ಮೂಡಿಸುವ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಹೇಳಿದರು.

ಜಾನಪದ ಕಲೆಗಳನ್ನು ಕೆಲವು ಚಟುವಟಿಕೆಗಳಿಗೆ ಸೀಮಿತ ಮಾಡುವುದು ಸರಿಯಾದುದಲ್ಲ. ಪರಿಸರ ನಾಶ, ನೀರು, ವಾಯು ಮಾಲಿನ್ಯ, ಕೆರೆ ಕಟ್ಟೆಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತ ಪರಿಸರ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಈ ಹಿಂದೆ ಮಹಿಳೆಯರು ಜಗುಲಿಯಲ್ಲಿ ಕೂತು ಜಾನಪದ ಹಾಡುಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದರು. ಅದೇ ರೀತಿಯಲ್ಲಿ ಈಗ ಆಗಬೇಕಿದೆ ಎಂದರು.

ಜನಪದ ಸಂಸ್ಕೃತಿ ಮತ್ತು ಪರಂಪರೆ ಗ್ರಾಮೀಣ ಜನರ ಜೀವನಾಡಿಯಾಗಿದೆ ಎಂದ ಅವರು, ಹಿಂದೆ ಹಳ್ಳಿಗಳಲ್ಲಿ, ಹಬ್ಬ, ಮದುವೆ ಶುಭ ಕಾರ್ಯಗಳಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಹಾಡುವ ಪದಗಳು ಜನಪದಗಳಾಗಿ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆಯೂ ಜನಪದ ಹಳ್ಳಿಗರಿಂದಲೇ ಜೀವಂತವಾಗಿದೆ. ನಾಡಿನ ಕನ್ನಡ ಜನಪದ ಸಂಸ್ಕೃತಿ ಉಳಿಸಲು, ರಾಜ್ಯದೆಲ್ಲೆಡೆ ಕಾರ್ಯಕ್ರಮ ರೂಪಿಸಲು ಸರಕಾರ ಅನುದಾನ ನೀಡಿ ಪ್ರೋತ್ಸಾಹ ನೀಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪಕಣ್ಣೂರು, ರಿಜಿಸ್ಟ್ರಾರ್ ಸಿದ್ರಾಮ, ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್, ಪಿಚ್ಚಳ್ಳಿ ಶ್ರೀನಿವಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News