ಮಹಾದಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ: ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ, ಸೆ.26: ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ನಿರೀಕ್ಷಿತ ನ್ಯಾಯ ದೊರಕದಿರುವುದರಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಹಾದಾಯಿಗೆ ಸಂಬಂಧಿಸಿದಂತೆ ತೀರ್ಪು ಬಂದ ದಿನದಿಂದಲೆ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಅದಕ್ಕಾಗಿ ಕಾನೂನು ತಜ್ಞರು ಮತ್ತು ತಾಂತ್ರಿಕ ತಜ್ಞರ ಜತೆ ನಿರಂತರ ಸಂಪರ್ಕದಲ್ಲಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದರು.
ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಕಾವೇರಿ ಬಗ್ಗೆ ಇರುವ ಕಾಳಜಿ ಮಹಾದಾಯಿ ಬಗ್ಗೆ ಇಲ್ಲವೆಂಬುದು ಸತ್ಯಕ್ಕೆ ದೂರವಾದದ್ದು. ಸದ್ಯದಲ್ಲಿಯೆ ಮಹಾದಾಯಿ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಪಾಲಿನ ಒಂದೇ ಒಂದು ಹನಿ ನೀರನ್ನು ಸಮುದ್ರ ಸೇರಲು ಬಿಡುವುದಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಯಾವುದೆ ಭಿನ್ನಮತ ಇಲ್ಲ. ಮಾಧ್ಯಮದವರು ಸಮ್ಮಿಶ್ರ ಸರಕಾರದ ಬಗ್ಗೆ ಇಲ್ಲಸಲ್ಲದ ವಿವಾದ ಹುಟ್ಟು ಹಾಕುವುದು ಬೇಡವೆಂದು ಅವರು ಮನವಿ ಮಾಡಿದರು.